ಬೆಂಗಳೂರು: ಶಿರಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ. ರಾಜೇಶ್ ಗೌಡ ಅವರು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ರಾಜೇಶ್ ಗೌಡರನ್ನು ಪಕ್ಷದ ಬಾವುಟ ನೀಡಿ ನಳಿನ್ ಕುಮಾರ್ ಕಟೀಲ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಶಿರಾ ಕ್ಷೇತ್ರದ 10 ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಕಟ್ಟಕಡೆಯ ಪ್ರಜೆಗೂ ಒಳ್ಳೆ ಜೀವನ ಸಿಗಲು ಒಳ್ಳೆಯ ರಾಜಕೀಯ ವೇದಿಕೆ ಅಗತ್ಯ. ನಾನೊಬ್ಬ ವೈದ್ಯ, ಇದುವರೆಗೆ ಯಾವುದೇ ಪಕ್ಷ ಸೇರಿರಲಿಲ್ಲ. ನಾನು ಮೊದಲಿಂದಲೂ ಬಿಜೆಪಿ ಬೆಂಬಲಿಸುತ್ತಿದ್ದೆ. ಇವತ್ತು ನಾನು ಬಿಜೆಪಿ ಸೇರುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ನಮ್ಮ ತಂದೆ ಮೂಡಲಗಿರಿಯಪ್ಪ ಮೂರು ಸಲ ಸಂಸದರಾಗಿದ್ದರು. ಒಮ್ಮೆ ಶಿರಾದ ಶಾಸಕರಾಗಿದ್ದರು. ನನಗೂ ರಾಜಕೀಯಕ್ಕೆ ಬರುವಂತೆ ಕ್ಷೇತ್ರದ ಜನತೆಯ ಒತ್ತಾಯ ಇತ್ತು. ನಾನು ಪಕ್ಷ ಸೇರಿದರೆ ಅದು ಬಿಜೆಪಿಯೇ ಆಗಿರಬೇಕು ಅಂದುಕೊಂಡಿದ್ದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ನಾನು ಇಂದು ಬಿಜೆಪಿ ಸೇರಿದ್ದೇನೆ. ಬಿಜೆಪಿ ಅಭಿವೃದ್ಧಿ ಪರ ಇರುವ ಪಕ್ಷ ಎಂದರು.
ಟಿಕೆಟ್ ಬಗ್ಗೆ ಹೈ ಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತದೆ ಅದಕ್ಕೆ ಬದ್ಧನಾಗಿರುತ್ತೇನೆ. ಈಗಾಗಲೇ ಮೂರು ಹೆಸರನ್ನು ಹೈಕಮಾಂಡ್ಗೆ ಕಳುಹಿಸಲಾಗಿದೆ. ಆಕಾಂಕ್ಷಿಯಾಗಿ ನನ್ನ ಹೆಸರನ್ನೂ ಕಳುಹಿಸಲಾಗಿದೆ. ಶಿರಾ ಕ್ಷೇತ್ರದಲ್ಲಿ ನಾವೆಲ್ಲ ಬಿಜೆಪಿ ವಿಜಯದ ಪತಾಕೆ ಹಾರಿಸುತ್ತೇವೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳಲ್ಲಿ ನಾನು ಸಂಪೂರ್ಣ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಶತಃಸಿದ್ಧ. ಶಿರಾದ ಬಹಳಷ್ಟು ಮುಖಂಡರು ಬಿಜೆಪಿ ಸೇರಿದ್ದಾರೆ. ಆ ಮೂಲಕ ಇನ್ನಷ್ಟು ಬಲ ತಂದಿದ್ದಾರೆ. ಅವರೆಲ್ಲರ ಶ್ರಮದಿಂದ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.