ಬೆಂಗಳೂರು: ನಗರದ ಚಾಮಾರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ, ನಾಡೋಜ ಡಾ. ಬರಗೂರು ಪ್ರತಿಷ್ಠಾನ ಹಮ್ಮಿಕೊಂಡಿದ್ದ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕಿ ಡಾ. ವಿಜಯಾ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತಿ ರಾಜಲಕ್ಷ್ಮಿ ಅವರೊಂದಿಗೆ ನಾನು ಸಂಕಟ ಮತ್ತು ಸಂತೋಷದ ಸಮಯದಲ್ಲಿ ಜೊತೆಗಿದ್ದೆ. ಆದರೆ, ಅವರು ಬೀದಿಗಿಳಿದು ಸಮಾಜದ ಬದಲಾವಣೆಗೆ ಹೋರಾಟ ಮಾಡದಿದ್ದರೂ, ರಾಜಲಕ್ಷ್ಮಿ ಅವರು ಮನೆಯಲ್ಲಿದ್ದು ಹೋರಾಟಕ್ಕೆ ಸ್ಫೂರ್ತಿ ನೀಡುತ್ತಿದ್ದರು. ಎಂತಹ ಸಮಯದಲ್ಲೂ ಕಣ್ಣೀರು ಹಾಕದೆ ಗಟ್ಟಿಯಾದ ಧ್ವನಿಯಿಂದ ಜೀವನ ನಡೆಸಿದ್ದಾರೆ ಎಂದು ಹೇಳಿದರು.
ರಾಜಲಕ್ಷ್ಮಿ ಅವರ ಹೆಸರಿನಲ್ಲಿ ಒಂದು ಪ್ರತಿಷ್ಠಾನ ರಚಿಸಿ ಯೋಗ್ಯರಿಗೆ ಪ್ರಶಸ್ತಿ ನೀಡುತ್ತಿರುವುದು ಉಪಯುಕ್ತ ಕೆಲಸವಾಗಿದೆ ಎಂದು ಹೇಳಿದ ಅವರು ಅನೇಕ ಸಂಕಷ್ಟ ಮತ್ತು ಅನೇಕರಿಗೆ ಮಾದರಿ ಆಗಿರುವಂತಹ ಮಹಿಳಾ ವ್ಯಕ್ತಿತ್ವವನ್ನು ಅವರು ಹೊಂದಿದ್ದರು ಎಂದರು.
ಸದ್ದಿಲ್ಲದೇ ದುಡಿಯುವ ಬಹಳಷ್ಟು ವ್ಯಕ್ತಿಗಳಿಗೆ ಇಂತಹ ಪ್ರಶಸ್ತಿ ನೀಡುವ ಮೂಲಕ ಶಕ್ತಿ ನೀಡುತ್ತಿರುವುದು ಪೂರಕವಾಗಿದೆ. ಸದ್ಯದ ಕನ್ನಡಪರ ಹೋರಾಟಗಳು ಇಂದು ತೆರೆಮರೆಗೆ ಸರಿಯುತ್ತಿರುವುದು ವಿಪರ್ಯಾಸ ಎಂದರು.