ಬೆಂಗಳೂರು: ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಕಳಪೆ ಗುಣಮಟ್ಟದ ಮಾಸ್ಕ್ ಹಾಗೂ ಪಿಪಿಇ ಕಿಟ್ ನೀಡಿದ್ದಾರೆಂದು ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ.
ಇನ್ನು ಕಳಪೆ ಗುಣಮಟ್ಟದ ಬಗ್ಗೆ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ಗೆ ಹೇಳಿದ್ರೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಸಿಬ್ಬಂದಿಗಳು ಆರೋಪ ಮಾಡ್ತಿದ್ದಾರೆ. ಕೊರೊನಾ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಪಿಪಿಇ ಕಿಟ್ ಕೂಡ ಸರಿಯಾಗಿಲ್ಲ. ನಿಗಾ ವಹಿಸುವ ಸಿಬ್ಬಂದಿ ಕೂಡ ಇಲ್ಲ. ಅಲ್ಲದೇ ಹೆಲ್ತ್ ವಾರಿಯರ್ಸ್ಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ನಮ್ಮಲ್ಲಿ ಯಾರಾದ್ರು ಸಿಬ್ಬಂದಿಗೆ ಪಾಸಿಟಿವ್ ಬಂದರೆ ಆಮೇಲೆ ನೋಡೋಣ ಎಂಬ ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಕೋವಿಡ್ -19ನಿಂದ ಮೃತಪಟ್ಟವರ ದೇಹವನ್ನ ಏನು ಮಾಡಬೇಕೆಂಬ ಮಾರ್ಗಸೂಚಿಯನ್ನು ಕೂಡ ಅನುಸರಿಸುತ್ತಿಲ್ಲ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.