ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಗಸ್ಟ್ 17ರಿಂದ 30ರವರೆಗೆ ರಾಜಭವನ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದೆ.
ಮಧ್ಯಾಹ್ನ 3:30ರಿಂದ ಸಂಜೆ 7 ಗಂಟೆವರೆಗೆ ಸಾರ್ವಜನಿಕರಿಗೆ ರಾಜಭವನದೊಳಗೆ ಹೋಗಿ ವೀಕ್ಷಣೆ ಮಾಡಲು ಮುಕ್ತ ಅವಕಾಶ ಸಿಗಲಿದೆ. ಪ್ರವೇಶ ಬಯಸುವವರು ಆನ್ಲೈನ್ ಮೂಲಕ ಆಧಾರ್ ಸಂಖ್ಯೆ, ಮೊಬೈಲ್ ನಂಬರ್, ಇ-ಮೇಲ್ ವಿಳಾಸಗಳ ಸಂಪೂರ್ಣ ವಿವರ ಹಾಗೂ ಯಾವ ದಿನ ಭೇಟಿ ಮಾಡಲು ಇಚ್ಛಿಸುತ್ತಿದ್ದೀರಿ ಎಂಬ ಬಗೆಗಿನ ವಿವರಗಳೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಆನ್ಲೈನ್ನಲ್ಲಿ ದೃಢೀಕರಣವಾದ ಬಳಿಕ ರಾಜಭವನ ಕೌಂಟರ್ನಲ್ಲಿ ಪ್ರವೇಶ ಪಾಸ್ ಸಿಗಲಿದೆ.
ಪಾಸ್ ಪಡೆದವರನ್ನು ರಾಜಭವನದ ಗಾಜಿನ ಮನೆ, ಬ್ಯಾಂಕ್ವೆಟ್ ಹಾಲ್ಗೆ ಕರೆದೊಯ್ದು, ಅದರ ವಿಶೇಷತೆಗಳನ್ನು ವಿವರಿಸಲಾಗುವುದು. ರಾಜಭವನದ ವೈಶಿಷ್ಟ್ಯ, ರಾಜ್ಯಪಾಲರ ಕರ್ತವ್ಯ, ಜವಾಬ್ದಾರಿಗಳನ್ನು ವಿವರಿಸುವ ಕಿರು ಚಿತ್ರವನ್ನು ಪ್ರದರ್ಶಿಸಲಾಗುವುದು. ಬಳಿಕ ಪಾರಂಪರಿಕ ಕಟ್ಟಡದ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುವ ಅವಕಾಶವನ್ನೂ ನೀಡಲಾಗುತ್ತದೆ.
ಅಂತಿಮವಾಗಿ ರಾಜಭವನ ಭೇಟಿ ನೀಡಿದವರಿಗೆ ರಾಜಭವನದಲ್ಲಿ ಚಹಾ ಕೂಟವನ್ನೂ ಏರ್ಪಡಿಸಲಾಗುತ್ತದೆ.