ಬೆಂಗಳೂರು: ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಮೃತ ಮತ್ತು ಜಲ ವರ್ಷದ ಅಭಿಯಾನದಡಿ 20 ಚೆಕ್ ಡ್ಯಾಂಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಹಲವು ಕಡೆ ಈಗಾಗಲೇ ಪ್ರಾರಂಭಿಸಲಾಗಿದೆ. ಅಲ್ಲದೇ 14 ಸಾವಿರ ಸಣ್ಣ ಪುಟ್ಟ ಜಲ ತಾಣಗಳನ್ನು ಪುನರುಜ್ಜೀವನಗೊಳಿಸಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಎಂ.ಎಸ್. ಬಿಲ್ಡಿಂಗ್ನಲ್ಲಿರುವ ಗ್ರಾಮೀಣಾಭಿವೃದ್ಧಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, ನರೇಗಾ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡು ಸುಮಾರು 500 ಕೋಟಿ ರೂ. ಬಂಡವಾಳದೊಂದಿಗೆ ಸಾರ್ವಜನಿಕ ಆಸ್ತಿಗಳನ್ನು ಸೃಜಿಸಲಾಗುವುದು ಎಂದು ಹೇಳಿದರು.
ಗಿಡ ನೆಡುವುದು ಕಡ್ಡಾಯ:
ಯಾವುದೇ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸುವ ಅಂದಾಜು ಪಟ್ಟಿಯಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಮತ್ತು ಗಿಡ ನೆಡುವುದನ್ನು ಕಡ್ಡಾಯಗೊಳಿಸುವ ಉದ್ದೇಶ ಇದೆ ಎಂದ ಸಚಿವರು, ಗ್ರಾಮ ಪಂಚಾಯಿತಿಗಳ ಮೂಲಕ ಸುಮಾರು 2 ಕೋಟಿ ಸಸಿಗಳನ್ನು ವಿತರಿಸಲು ಉದ್ದೇಶಿಸಲಾಗಿದೆ ಎಂದರು.
ಜಲಾಮೃತ ಮತ್ತು ಜಲ ವರ್ಷ ಅಭಿಯಾನದ ಅಂಗವಾಗಿ ವಿಶ್ವ ಪರಿಸರದ ದಿನಾಚರಣೆ ಭಾಗವಾಗಿ ಜೂನ್ 11ರಂದು ಕನಿಷ್ಠ 30 ಲಕ್ಷ ಸಸಿಗಳನ್ನು ನೆಡಲು ತೀರ್ಮಾನಿಸಲಾಗಿದೆ. ಸತತ ಬರಗಾಲ, ಮಳೆ ಕೊರತೆ ಹಿನ್ನೆಲೆಯಲ್ಲಿ ಜಲ ಸಂರಕ್ಷಣೆ ಮತ್ತು ಜಲ ಜಾಗೃತಿ ಮೂಡಿಸುವ ಉದ್ದೇಶವಿರುವ ಜಲಾಮೃತ-ಜಲ ವರ್ಷ ಎಂಬ ಅಭಿಯಾನ ಆರಂಭಿಸಲಾಗಿದೆ.
ಇದರಲ್ಲಿ ನೀರಿನ ಮಹತ್ವ ಮತ್ತು ನೀರಿನ ಕೊರತೆಯನ್ನು ಜನರು ಅರ್ಥ ಮಾಡಿಕೊಂಡು ಮನೆ ಮನೆಗಳಲ್ಲಿಯೂ ಮಳೆ ನೀರನ್ನು ಸಂಗ್ರಹಿಸಬೇಕು. ಸಾಕ್ಷರತೆ, ಜಲ ಸಂರಕ್ಷಣೆ, ಜಲ ಪ್ರಜ್ಞಾವಂತ ಬಳಕೆ, ಹಸಿರೀಕರಣ ಆದ್ಯತೆಯಾಗಿದ್ದು, ಜೂನ್ 11ರಂದು ಸಾರ್ವಜನಿಕರು, ಶಾಲಾ ಮಕ್ಕಳು, ಗ್ರಾಮ ಪಂಚಾಯಿತಿ ಸದಸ್ಯರನ್ನು ಸೇರಿಸಿ ರಾಜ್ಯಾದ್ಯಂತ ಕನಿಷ್ಠ 30 ಲಕ್ಷ ಸಸಿ ನೆಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಎಲ್ಲಾ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅರಣ್ಯ, ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿಗಳಗೊಂಡ ಸ್ಥಳೀಯರ ಅನುಕೂಲಕ್ಕೆ ತಕ್ಕಂತೆ ಸಸಿ ನೀಡಲಾಗುವುದು. ಮಾವು, ಹಲಸಿನ ಹಣ್ಣಿನ ಗಿಡಗಳಿಗೂ ಆದ್ಯತೆ ನೀಡಿದ್ದು, ಸಸಿಗಳ ನಿರ್ವಹಣೆ ಜವಾಬ್ದಾರಿ ಗ್ರಾಪಂಗಳಿಗೆ ನೀಡಲಾಗುವುದು ಎಂದರು. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಚೇರಿಯಲ್ಲಿ ಕಡ್ಡಾಯವಾಗಿ ಸಸಿ ನೆಡಲಾಗುತ್ತದೆ. ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ವಾಣಿಜ್ಯ ಕಟ್ಟಡಗಳಲ್ಲೂ ಮಳೆ ನೀರು ಸಂಗ್ರಹ ವ್ಯವಸ್ಥೆ ರೂಪಿಸುವುದನ್ನು ಕಡ್ಡಾಯಗೊಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.