ಬೆಂಗಳೂರು: ‘ನೀವು ಕೊಡಗು ಜಿಲ್ಲೆಗೆ ಹೋಗುವ ಬದಲು ರಾಮನಗರ ಜಿಲ್ಲೆಗೆ ಬಂದು ನೋಡಿ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದರು.
ಮಳೆ ಹಾನಿ ಕುರಿತ ಚರ್ಚೆ ವೇಳೆ ಬಹುತೇಕ ಜಿಲ್ಲಾ ಸಚಿವರು ಜಿಲ್ಲೆಗಳಿಗೆ ಹೋಗಿಲ್ಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸುತ್ತ, ನಾವು ಸಾಕಷ್ಟು ಬಾರಿ ಹೋಗಿದ್ದೇವೆ. ನೀವೇ ಐದು ವರ್ಷ ಮುಖ್ಯಮಂತ್ರಿಗಳಾಗಿದ್ದಾಗ ರಾಮನಗರಕ್ಕೆ ಬಂದಿಲ್ಲ. ಆ ಜಿಲ್ಲೆ ಪ್ರತಿನಿಧಿಸುತ್ತಿದ್ದ ಪ್ರಭಾವಿಗಳು ಸಹ ಕೆಲಸ ಮಾಡಿಲ್ಲ. 75 ವರ್ಷದಲ್ಲಿ ಘಟಾನುಘಟಿಗಳು ಮಾಡದ ಕೆಲಸವನ್ನು ನಾವು ಮಾಡಿದ್ದೇವೆ. ನೀವೇ ಬಂದು ಬದಲಾವಣೆ ಗಮನಿಸಿ ಎಂದು ಹೇಳಿದರು.
ಇದನ್ನೂ ಓದಿ: ಮಳೆ ಹಾನಿ ವೀಕ್ಷಣೆಗೆ ಕೇಂದ್ರ ಅಧ್ಯಯನ ತಂಡ.. ಎನ್ಡಿಆರ್ಎಫ್ ಮಾರ್ಗಸೂಚಿಯನ್ವಯ 79 ಕೋಟಿ ನಷ್ಟ
ಈ ವೇಳೆ ಸಿದ್ದರಾಮಯ್ಯ ಮಾತನಾಡಿ, ನೀವು ಬಹಳ ವೀರಾವೇಶದಿಂದ ಹೇಳುತ್ತಿದ್ದೀರಿ, ಸಾಕು ಕುಳಿತುಕೊಳ್ಳಿ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ನೀರು ನಿಂತು ರಾಮನಗರಕ್ಕೆ ಹೋಗಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಬಂದು ಮಾತನಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಅದಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ್, ‘ಜೋಶ್ ಇರಬೇಕಲ್ಲ ಸರ್. ಹೀಗಾಗಿ, ಜೋರಾಗಿ ಮಾತನಾಡುತ್ತಿದ್ದೇನೆ. ನೀವು ಹೇಳಿದ ರಸ್ತೆ ಅಭಿವೃದ್ಧಿ ಪೂರ್ಣ ಆಗಿದೆಯಾ?, ಸರ್ವಿಸ್ ರಸ್ತೆ ಆಗಿದೆಯಾ?, ಪೂರ್ಣ ಕಾಮಗಾರಿ ಆಗದೆಯೇ ಮಾತನಾಡಲು ಆಗುತ್ತಾ?’ ಎಂದು ಪ್ರಶ್ನಿಸಿದರು. ಈ ವೇಳೆ ಸಿದ್ದರಾಮಯ್ಯ, ‘ನೀವು ಎಲ್ಲವನ್ನೂ ನೋಡಿಕೊಂಡು ಮಾಡಬೇಕಲ್ಲವೇ?, ನಿಮ್ಮ ಸರ್ಕಾರದ ನಿರ್ಲಕ್ಷ್ಯದಿಂದ ಜನರು ಪರದಾಡಿದ್ದು ಸುಳ್ಳಾ?, ಜನರ ಸಂಕಷ್ಟದ ಬಗ್ಗೆ ಮಾತನಾಡಬಾರದಾ?’ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಆಫೀಸ್ನಲ್ಲಿ ಕೂತು ಸಮೀಕ್ಷೆ ಮಾಡೋದಲ್ಲ, ಸೂಕ್ತ ವರದಿ ನೀಡಿ: ಅಧಿಕಾರಿಗಳಿಗೆ ಸಚಿವ ಸಿಸಿ ಪಾಟೀಲ ಕ್ಲಾಸ್
ಮಧ್ಯಪ್ರವೇಶಿಸಿದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟಿಲ್, ‘ಎಷ್ಟು ಪ್ರಮಾಣದ ಮಳೆಯಾಗಿತ್ತು ಎಂಬುದನ್ನೂ ಹೇಳಬೇಕಲ್ಲವೇ’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನೀವು ಇರಲಿಲ್ಲ, ಎಲ್ಲೆಲ್ಲಿ ಎಷ್ಟೆಷ್ಟು ಪ್ರಮಾಣದ ಮಳೆಯಾಗಿದೆ ಎಂಬುದೆಲ್ಲವನ್ನೂ ವಿವರವಾಗಿ ಹೇಳಿದ್ದೇನೆ. ನಿಮ್ಮ ಜಿಲ್ಲೆಯ ಬಗ್ಗೆಯೂ ಹೇಳಿದ್ದೇನೆ. ನಾನು ನವಲಗುಂದಕ್ಕೆ ಹೋಗಿದ್ದೆ. ಅಲ್ಲಿ ಜಿಲ್ಲಾಧಿಕಾರಿಗಳಿಗೆ ಕೇಳಿದ್ರೆ ಸಚಿವರು ಬಂದಿಲ್ಲ, ಕೇವಲ ಫೋನ್ ಮಾಡಿದ್ದರಷ್ಟೇ ಎಂದು ಹೇಳಿದ್ದಾರೆ. ಹೀಗಾಗಿ, ನೀವೂ ಹೋಗಿಲ್ಲ ಕುಳಿತುಕೊಳ್ಳಿ’ ಎಂದು ಟಾಂಗ್ ನೀಡಿದರು.
ಇದನ್ನೂ ಓದಿ: ಜಲಪ್ರಳಯದಿಂದ ಹಾನಿ: ಕೊಡಗಿಗೆ ಕೇಂದ್ರ ಅಧ್ಯಯನ ತಂಡ ಭೇಟಿ, ಪರಿಶೀಲನೆ