ಬೆಂಗಳೂರು: ದೇಶದ ಬಹು ದೊಡ್ಡ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ರೈಲು ಸಂಚಾರವನ್ನು ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ನಿರ್ಬಂಧಿಸಿದೆ. ಇದರ ಪರಿಣಾಮವಾಗಿ ರೈಲು ಪ್ರಯಾಣಿಕರನ್ನೇ ನಂಬಿದ್ದ ಕೂಲಿಗಳೀಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಎಂದೇ ಹೆಸರಾಗಿರುವ ಸಿಟಿ ರೈಲ್ವೆ ಸ್ಟೇಷನ್, ಯಶವಂತಪುರ, ಕಂಟೋನ್ಮೆಂಟ್, ಯಲಹಂಕ, ಕೆ.ಆರ್ ಪುರ, ಮಲ್ಲೇಶ್ವರಂ, ಕೆಂಗೇರಿ, ವೈಟ್ ಫೀಲ್ಡ್ ಸೇರಿದಂತೆ ನಗರದ ವಿವಿಧ ರೈಲು ನಿಲ್ದಾಣಗಳಲ್ಲಿ ಸಾವಿರಕ್ಕೂ ಅಧಿಕ ಮಂದಿ ಅಧಿಕೃತ ಕೂಲಿಗಳಿದ್ದಾರೆ. ಆದರೆ, ರೈಲು ಸಂಚಾರ ನಿರ್ಬಂಧಿಸಿದ ಬಳಿಕ ಪ್ರಯಾಣಿಕರೇ ಇಲ್ಲವಾಗಿದ್ದು, ಕೂಲಿಗಳ ಸಂಪಾದನೆ ಶೂನ್ಯವಾಗಿದೆ.
ಲಾಕ್ಡೌನ್ಗೆ ಮೊದಲು ನಗರದ ರೈಲ್ವೆ ನಿಲ್ದಾಣಗಳಿಗೆ ನೂರಾರು ರೈಲುಗಳು ಬಂದು ಹೋಗುತ್ತಿದ್ದವು. ಪ್ರಮುಖ ನಿಲ್ದಾಣಗಳಾದ ಸಿಟಿ ರೈಲ್ವೆ ನಿಲ್ದಾಣಕ್ಕೆ ನಿತ್ಯ 80ರಿಂದ 85, ಯಶವಂತಪುರ ನಿಲ್ದಾಣಕ್ಕೆ 40ರಿಂದ 45, ಕಂಟೋನ್ಮೆಂಟ್ಗೆ 35ರಿಂದ 40 ರೈಲುಗಳು ಬಂದು ಹೋಗುತ್ತಿದ್ದವು. ಅಂತೆಯೇ, ನಿತ್ಯವೂ 3 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಈ ನಿಲ್ದಾಣಗಳ ಮೂಲಕ ಪ್ರಯಾಣಿಸುತ್ತಿದ್ದರು. ಈ ವೇಳೆ, ಪ್ರಯಾಣಿಕರು ತರುತ್ತಿದ್ದ ಲಗೇಜ್ಗಳನ್ನು ನಿಲ್ದಾಣದ ಒಳಕ್ಕೂ, ಹೊರಕ್ಕೂ ಸಾಗಿಸಿ ಕೂಲಿಗಳು ಸರಾಸರಿ ದಿನಕ್ಕೆ 800ರಿಂದ 1000 ರೂಪಾಯಿವರೆಗೆ ಸಂಪಾದಿಸುತ್ತಿದ್ದರು.
ಆದರೆ, ಲಾಕ್ಡೌನ್ ಬಳಿಕ ರೈಲುಗಳ ಸಂಚಾರ ಬಹುತೇಕ ನಿಂತು ಹೋಗಿದೆ. ಇದರ ನಡುವೆ ದಿನಕ್ಕೆ ಒಂದೋ ಎರಡೋ ವಿಶೇಷ ರೈಲುಗಳು ಬಂದು ಹೋಗುತ್ತಿದ್ದು ಪ್ರಯಾಣಿಕರ ಸಂಖ್ಯೆ ವಿಪರೀತ ಕಡಿಮೆ ಇದೆ. ಹೀಗಾಗಿ ದಿನಕ್ಕೆ ನೂರು ರೂಪಾಯಿ ದುಡಿಯುವುದೂ ಕಷ್ಟ ಎನ್ನುತ್ತಾರೆ ರೈಲ್ವೆ ಕೂಲಿಗಳು.
ನಿತ್ಯದ ಕೂಲಿ ಸಂಪಾದನೆ ನಂಬಿಕೊಂಡು ಬದುಕುತ್ತಿದ್ದ ನಮಗೀಗ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿದೆ. ಇದರ ನಡುವೆ ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚಗಳನ್ನೂ ನಿಭಾಯಿಸಬೇಕಿದ್ದು ಬದುಕೇ ದುಸ್ತರವಾಗಿದೆ. ರೈಲ್ವೆ ಅಧಿಕಾರಿಗಳಲ್ಲಿ ಅಂತಃಕರಣ ಉಳ್ಳ ಕೆಲವರು ನಮ್ಮ ಕಷ್ಟ ನೋಡಿ ಅಲ್ಪ ಸ್ವಲ್ಪ ನೆರವು ನೀಡಿದ್ದಾರೆ. ಇಲ್ಲದಿದ್ದರೆ ಬದುಕು ಮತ್ತಷ್ಟು ಕಷ್ಟವಾಗುತ್ತಿತ್ತು ಎನ್ನುತ್ತಾರೆ.
ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರು, ಚಾಲಕರು ಸೇರಿದಂತೆ ಶ್ರಮಿಕ ವರ್ಗಕ್ಕೆ ತಲಾ 5 ಸಾವಿರ ನೆರವು ನೀಡಿದೆ. ಅಂತೆಯೇ ರೈಲ್ವೆ ಕೂಲಿಗಳನ್ನೂ ಕಾರ್ಮಿಕರಂತೆ ಪರಿಗಣಿಸಿ ಪರಿಹಾರ ಕಲ್ಪಿಸಲು ಅವಕಾಶವಿದೆ. ಆದರೆ, ಇವರು ಸರ್ಕಾರ ಗುರುತಿಸಿದ ನೋಂದಾಯಿತ ಕಾರ್ಮಿಕರ ಸಂಘಗಳಲ್ಲಿ ಸದಸ್ಯರಾಗಿಲ್ಲ. ಇಂತಹ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿಕೊಂಡು ಪರಿಹಾರ ಕೊಡುತ್ತೇವೆಂಬ ಸರ್ಕಾರಿ ಅಧಿಕಾರಿಗಳ ಹೇಳಿಕೆ ಇಂದಿಗೂ ನೆರವೇರಿಲ್ಲ. ಅದ್ದರಿಂದ ಸರ್ಕಾರ ತಮ್ಮ ಕಷ್ಟ ಪರಿಗಣಿಸಿ ನೆರವು ನೀಡಲು ಮುಂದಾಗಬೇಕು ಎಂದು ರೈಲ್ವೆ ಕೂಲಿಗಳು ಒತ್ತಾಯಿಸಿದ್ದಾರೆ.