ಬೆಂಗಳೂರು: ನಗರ ಸಂಚಾರ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ನೀತಿ ಆಯೋಗ, ರೈಲ್ವೆ ಸಚಿವಾಲಯ, ಯೋಜನಾ ಮತ್ತು ಅಂಕಿ ಅಂಶ ಹಾಗೂ ಹಣಕಾಸು ಸಚಿವಾಲಯ ಸಬ್ ಅರ್ಬನ್ ಯೋಜನೆಗೆ ಅನುಮೋದನೆ ನೀಡಿದ್ದು, ಅಡೆತಡೆಗಳನ್ನು ತೆರವುಗೊಳಿಸಿದೆ. ಈ ಯೋಜನೆಯನ್ನು ಅಂತಿಮ ಅನುಮೋದನೆಗಾಗಿ ಕ್ಯಾಬಿನೆಟ್ ಮುಂದೆ ಇರಿಸಲಾಗುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಬ್ ಅರ್ಬನ್ ರೈಲ್ವೆ ಜಾಲವನ್ನು ಹೊಂದಿರದ ಏಕೈಕ ಮೆಟ್ರೋ ನಗರ ನಮ್ಮದು. ಕಳೆದ 33 ವರ್ಷಗಳಿಂದ ಬೆಂಗಳೂರು ನಾಗರಿಕರು ಸಬ್ ಅರ್ಬನ್ ರೈಲ್ವೆಗಾಗಿ ಒತ್ತಾಯಿಸುತ್ತಿದ್ದರು. ಈ ವರ್ಷದ ಆರಂಭದಲ್ಲಿ ಪ್ರಸ್ತಾವಿತ ಯೋಜನೆಯು ನೀತಿ ಆಯೋಗದಲ್ಲಿ ತಡೆ ಹಿಡಿಯಲಾಗಿತ್ತು. ಈ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಸ್ಟ್‌ನಲ್ಲಿ ಅನುಮೋದನೆ ನೀಡಿದ್ದು, ಕಳೆದ ವಾರ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಬೆಂಗಳೂರಿನ ಸಂಚಾರ ದಟ್ಟಣೆಯಿಂದ ಮುಕ್ತಿಗಾಗಿ ಸಬ್ ಅರ್ಬನ್ ರೈಲ್ವೆಯ ಮಹತ್ವವನ್ನು ಅವರ ಗಮನಕ್ಕೆ ತಂದಿದ್ದೇನೆ ಎಂದರು.
ಬೆಂಗಳೂರಿನ ಎಲ್ಲ ಸಂಸತ್ ಸದಸ್ಯರು, ಪಿಸಿ ಮೋಹನ್ ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಪ್ರಯತ್ನಗಳು ಇಂದು ಫಲ ನೀಡಿದ್ದು, ಇದು ಮುಂದಿನ ದಿನಗಳಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಅನುಮೋದನೆಗೆ ಬರಲಿದ್ದು, ಶೀಘ್ರವೇ ರಾಜ್ಯದ ಎಲ್ಲ ಸಂಸತ್ ಸದಸ್ಯರು ಪ್ರಧಾನಿಯನ್ನು ಭೇಟಿ ಮಾಡಿ ಯೋಜನೆಯನ್ನು ಅನುಮೋದಿಸುವಂತೆ ವಿನಂತಿಸುತ್ತೇವೆ ಎಂದರು.