ಬೆಂಗಳೂರು: ಕಾಂಗ್ರೆಸ್ ಪಕ್ಷವು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದೆ. ರಾಜ್ಯ ನಾಯಕರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹೆಚ್ಚು ಸ್ಥಳೀಯ ಪ್ರಚಾರವನ್ನು ನಡೆಸಲಾಯಿತು. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯು ದೇಶಾದ್ಯಂತ 3,570 ಕಿ.ಮೀ. ಕ್ರಮಿಸಿತ್ತು. ಈ ಪಾದಯಾತ್ರೆಯು ವಿಶೇಷವಾಗಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ಭಾರತ್ ಜೋಡೋ ಯಾತ್ರೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ರಾಜ್ಯ ಪ್ರವಾಸ ಮಾಡಿದರು. ಅವರು ಕರ್ನಾಟಕದಲ್ಲಿ 21 ದಿನಗಳನ್ನು ಕಳೆದರು. ಸೆಪ್ಟೆಂಬರ್ 31, 2022ರಿಂದ ಅಕ್ಟೋಬರ್ 19, 2022ರವರೆಗೆ ಏಳು ಜಿಲ್ಲೆಗಳನ್ನು ಒಳಗೊಂಡ 511 ಕಿಲೋಮೀಟರ್ ದೂರವನ್ನು ಪ್ರಯಾಣಿಸಿದರು. ಚಾಮರಾಜನಗರದಿಂದ ಯಾತ್ರೆ ಆರಂಭಿಸಿದ ರಾಹುಲ್, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸಂಚರಿಸಿದರು. ಈ ಏಳು ಜಿಲ್ಲೆಗಳು ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಲ್ಲಿ 51 ಕ್ಷೇತ್ರಗಳನ್ನು ಹೊಂದಿದ್ದು, ಅದರಲ್ಲಿ ಕಾಂಗ್ರೆಸ್ 37 ಸ್ಥಾನಗಳನ್ನು ಗೆದ್ದಿದೆ.
7 ಜಿಲ್ಲೆಗಳ ಒಟ್ಟು ವಿಧಾನಸಭಾ ಕ್ಷೇತ್ರಗಳಿಂದ ಪಕ್ಷಗಳು ಗೆದ್ದರುವ ಸ್ಥಾನಗಳ ವಿವರ:
ಜಿಲ್ಲೆಗಳು | ವಿಧಾನಸಭಾ ಕ್ಷೇತ್ರಗಳು | ಕಾಂಗ್ರೆಸ್ | ಬಿಜೆಪಿ | ಜೆಡಿಎಸ್ | ಇತರೆ |
ಚಾಮರಾಜನಗರ | 4 | 3 | 0 | 1 | 0 |
ಮೈಸೂರು | 11 | 8 | 1 | 2 | 0 |
ಮಂಡ್ಯ | 7 | 5 | 0 | 1 | 1 |
ತುಮಕೂರು | 11 | 7 | 2 | 2 | 0 |
ಚಿತ್ರದುರ್ಗ | 6 | 5 | 1 | 0 | 0 |
ಬಳ್ಳಾರಿ | 5 | 5 | 0 | 0 | 0 |
ರಾಯಚೂರು | 7 | 4 | 2 | 1 | 0 |
ಒಟ್ಟು ಸ್ಥಾನಗಳು | 51 | 37 | 6 | 7 | 1 |
ಏಳು ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳನ್ನು ಗಮನಿಸಿ:
ಚಾಮರಾಜನಗರ: ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಾದ ಹನೂರು, ಕೊಳ್ಳೇಗಾಲ, ಚಾಮರಾಜನಗರ ಮತ್ತು ಗುಂಡ್ಲುಪೇಟೆ. ಜೆಡಿಎಸ್ ಗೆದ್ದಿರುವ ಹನೂರು ಬಿಟ್ಟರೆ, ಮೂರೂ ಸೀಟುಗಳನ್ನು ಕಾಂಗ್ರೆಸ್ ಗೆದ್ದಿದೆ. 2018 ವಿಧಾನಸಭೆ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಮಾತ್ರ ಕಾಂಗ್ರೆಸ್ ಗೆದ್ದಿತ್ತು.
ಮೈಸೂರು: ಈ ಜಿಲ್ಲೆಯಲ್ಲಿ 11 ಸ್ಥಾನಗಳಿದ್ದು, ಕಾಂಗ್ರೆಸ್ ಎಂಟು ಸ್ಥಾನಗಳನ್ನು ಗೆದ್ದಿದ್ದರೆ, ಎರಡು ಜೆಡಿಎಸ್ ಮತ್ತು ಬಿಜೆಪಿಗೆ ಒಂದು ಸ್ಥಾನ ಜಯಗಳಿಸಿದೆ. ಕೃಷ್ಣರಾಜನಗರ (ಕಾಂಗ್ರೆಸ್), ಹುಣಸೂರು (ಜೆಡಿಎಸ್), ಹೆಗ್ಗಡದೇವನಕೋಟೆ (ಕಾಂಗ್ರೆಸ್ ಉಳಿಸಿಕೊಂಡಿದೆ), ನಂಜನಗೂಡು (ಕಾಂಗ್ರೆಸ್), ಚಾಮುಂಡೇಶ್ವರಿ (ಜೆಡಿಎಸ್ ಉಳಿಸಿಕೊಂಡಿದೆ), ಕೃಷ್ಣರಾಜ (ಬಿಜೆಪಿ ಉಳಿಸಿಕೊಂಡಿದೆ), ಚಾಮರಾಜ (ಬಿಜೆಪಿಯಿಂದ ಕಾಂಗ್ರೆಸ್ ವಶಪಡಿಸಿಕೊಂಡಿದೆ), ನರಸಿಂಹರಾಜ (ಕಾಂಗ್ರೆಸ್ ಉಳಿಸಿಕೊಂಡಿದೆ), ವರುಣಾ (ಕಾಂಗ್ರೆಸ್ ಉಳಿಸಿಕೊಂಡಿದೆ) ಮತ್ತು ಟಿ.ನರಸೀಪುರ (ಜೆಡಿಎಸ್‌ನಿಂದ ಕಾಂಗ್ರೆಸ್ ವಶಪಡಿಸಿಕೊಂಡಿದೆ). ಪಿರಿಯಾಪಟ್ಟಣ (ಕಾಂಗ್ರೆಸ್ ಉಳಿಸಿಕೊಂಡಿದೆ).
ಮಂಡ್ಯ: ಈ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಐದು, ಜೆಡಿಎಸ್ ಒಂದರಲ್ಲಿ ಗೆಲುವು ಸಾಧಿಸಿದೆ ಮತ್ತು ಇತರೆ ಪಕ್ಷವು ಒಂದು ಸ್ಥಾನವನ್ನು ಗೆದ್ದಿದೆ. ಮಳವಳ್ಳಿ (ಕಾಂಗ್ರೆಸ್ ಗೆಲುವು), ಮದ್ದೂರು (ಕಾಂಗ್ರೆಸ್), ಜೆಡಿಎಸ್‌ನಿಂದ ಕಣಕ್ಕಿಳಿದಿದ್ದು, ಮೇಲುಕೋಟೆ (ಜೆಡಿಎಸ್‌ನಿಂದ ಸರ್ವೋದಯ ಕರ್ನಾಟಕ ಪಕ್ಷ), ಮಂಡ್ಯ (ಜೆಡಿಎಸ್‌ನಿಂದ ಕಾಂಗ್ರೆಸ್ ವಶ), ಶ್ರೀರಂಗಪಟ್ಟಣ (ಜೆಡಿಎಸ್‌ನಿಂದ ಕಾಂಗ್ರೆಸ್ ವಶ), ನಾಗಮಂಗಲ (ಜೆಡಿಎಸ್‌ನಿಂದ ಕಾಂಗ್ರೆಸ್ ವಶ) ಮತ್ತು ಕೃಷ್ಣರಾಜಪೇಟೆ (ಜೆಡಿಎಸ್ ಉಳಿಸಿಕೊಂಡಿದೆ).
ತುಮಕೂರು: ಈ ಜಿಲ್ಲೆಯಲ್ಲಿ 11 ಸ್ಥಾನಗಳಿದ್ದು, 7ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಉಳಿದ ನಾಲ್ಕು ಜೆಡಿಎಸ್ ಮತ್ತು ಬಿಜೆಪಿ ಸ್ಥಾನಗಳನ್ನು ಹಂಚಿಕೊಂಡಿವೆ. ಚಿಕ್ಕನಾಯಕನಹಳ್ಳಿ (ಜೆಡಿಎಸ್‌ನಿಂದ ವಶ ಬಿಜೆಪಿ), ತಿಪಟೂರು (ಬಿಜೆಪಿಯಿಂದ ಕಾಂಗ್ರೆಸ್ ವಶ), ತುರುವೇಕೆರೆ (ಜೆಡಿಎಸ್), ಕುಣಿಗಲ್ (ಕಾಂಗ್ರೆಸ್), ತುಮಕೂರು ನಗರ (ಬಿಜೆಪಿ), ತುಮಕೂರು ಗ್ರಾಮಾಂತರ (ಬಿಜೆಪಿ), ಕೊರಟಗೆರೆ (ಕಾಂಗ್ರೆಸ್), ಗುಬ್ಬಿ (ಕಾಂಗ್ರೆಸ್), ಸಿರಾ (ಕಾಂಗ್ರೆಸ್), ಪಾವಗಡ (ಕಾಂಗ್ರೆಸ್), ಮಧುಗಿರಿ (ಕಾಂಗ್ರೆಸ್).
ಚಿತ್ರದುರ್ಗ: ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿದ್ದು, 6ರಲ್ಲಿ 5ರಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಬಿಜೆಪಿ ಒಂದು ಸ್ಥಾನ ಗೆದ್ದಿದೆ. ಮೊಳಕಾಲ್ಮುರು (ಕಾಂಗ್ರೆಸ್), ಚಳ್ಳಕೆರೆ (ಕಾಂಗ್ರೆಸ್) ಚಿತ್ರದುರ್ಗ (ಕಾಂಗ್ರೆಸ್), ಹಿರಿಯೂರು (ಕಾಂಗ್ರೆಸ್), ಹೊಸದುರ್ಗ (ಕಾಂಗ್ರೆಸ್), ಹೊಳಲ್ಕೆರೆ (ಬಿಜೆಪಿ).
ಬಳ್ಳಾರಿ: ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಪ್ರಮುಖ ಜಿಲ್ಲೆ ಐದರಲ್ಲಿಯೂ ಪಕ್ಷ ಗೆಲುವು ಸಾಧಿಸಿದೆ. ಕಂಪ್ಲಿ, ಸಿರಗುಪ್ಪ, ಬಳ್ಳಾರಿ, ಬಳ್ಳಾರಿ ನಗರ ಮತ್ತು ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನಿ ನಗೆ ಬೀರಿದೆ.
ರಾಯಚೂರು: ಈ ಜಿಲ್ಲೆಯ ಏಳು ಸ್ಥಾನಗಳ ಪೈಕಿ ಕಾಂಗ್ರೆಸ್ 4 ಸ್ಥಾನ ಗೆದ್ದರೆ, ಬಿಜೆಪಿ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕ್ರಮವಾಗಿ ಎರಡು ಮತ್ತು ಒಂದು ಸ್ಥಾನಗಳಲ್ಲಿ ಗೆದ್ದಿವೆ. ರಾಯಚೂರು ಗ್ರಾಮಾಂತರ (ಕಾಂಗ್ರೆಸ್), ರಾಯಚೂರು (ಬಿಜೆಪಿ), ಮಾನ್ವಿ (ಕಾಂಗ್ರೆಸ್), ದೇವದುರ್ಗ (ಜೆಡಿಎಸ್), ಲಿಂಗಸುಗೂರು (ಬಿಜೆಪಿ), ಸಿಂಧನೂರು (ಕಾಂಗ್ರೆಸ್), ಮಸ್ಕಿ (ಕಾಂಗ್ರೆಸ್).
ಇದನ್ನೂ ಓದಿ: ಖರ್ಗೆ ಅವರಿಗೆ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂದು ಮಾತುಕೊಟ್ಟಿದ್ದೆ, ಯಾರ ಕ್ಲೇಮ್ ಬಗ್ಗೆಯೂ ಮಾತಾಡಲ್ಲ: ಡಿಕೆಶಿ