ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಗತಿಗೆ ರಾಹುಲ್ ಗಾಂಧಿ ರಾಷ್ಟ್ರೀಯ ಅಧ್ಯಕ್ಷರಾಗುವುದು ಅಗತ್ಯ ಹಾಗೂ ಅನಿವಾರ್ಯ. ಇದನ್ನ ನಾನು ಹಿಂದೆಯೂ ಪ್ರಸ್ತಾಪಿಸಿದ್ದೆ, ಈಗಲೂ ಪ್ರತಿಪಾದಿಸುತ್ತೇನೆ. ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರ ಒಮ್ಮತದ ನಿಲುವು ಸಹ ಇದೇ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ಧಾರೆ.
ಎಐಸಿಸಿ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಬುಲಾವ್ ಮೇರೆಗೆ ಕಳೆದ ವಾರ ದೆಹಲಿಗೆ ತೆರಳಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಪ್ರಗತಿಗೆ ರಾಹುಲ್ ಗಾಂಧಿ ರಾಷ್ಟ್ರೀಯ ಅಧ್ಯಕ್ಷರಾಗುವುದೇ ಸೂಕ್ತ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ನಗರದಲ್ಲಿ ಸೋಮವಾರ ಖಾಸಗಿ ಸಮಾರಂಭದಲ್ಲಿ ಪಾಲ್ಗೊಂಡ ಸಂದರ್ಭ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಇದೇ ವಿಚಾರವನ್ನು ಪುನರುಚ್ಚರಿಸಿದ್ದಾರೆ.
ಕಳೆದವಾರ ಸೋನಿಯಾ ಗಾಂಧಿ ಭೇಟಿ ಮಾಡಿದ ಸಂದರ್ಭ ಸಾಕಷ್ಟು ವಿಚಾರಗಳ ಕುರಿತು ಮಾತುಕತೆ ನಡೆಸಿರುವ ಸಿದ್ದರಾಮಯ್ಯ, ಬಹುತೇಕ ಸಕಾರಾತ್ಮಕ ಸ್ಪಂದನೆ ಪಡೆದು ಹಿಂದಿರುಗಿದ್ದಾರೆ. ಮುಂಬರುವ ದಿನಗಳಲ್ಲಿ ಎದುರಾಗುವ ಚುನಾವಣೆಯ ಗೆಲುವನ್ನು ಪ್ರಾಮುಖ್ಯವಾಗಿ ಇರಿಸಿಕೊಂಡು, ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆ ಬಲಪಡಿಸುವಂತೆ ಸೋನಿಯಾ ಗಾಂಧಿ ಸಿದ್ದರಾಮಯ್ಯಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಪಕ್ಷ ಬಲವರ್ಧನೆಯ ವಿಚಾರದಲ್ಲಿ ತಾವು ಕೈಗೊಳ್ಳುವ ತೀರ್ಮಾನಗಳು ಪಕ್ಷದ ಸಂಪೂರ್ಣ ಬೆಂಬಲ ಇರಲಿದೆ. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಅವಕಾಶ ಒದಗಿದರೆ ತಮಗೆ ಸೂಕ್ತ ಸ್ಥಾನಮಾನವನ್ನು ಕಾಂಗ್ರೆಸ್ ಪಕ್ಷ ನೀಡಲಿದೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಸೋನಿಯಾ ಕುಟುಂಬದ ಗುಣಗಾನ:
ದೆಹಲಿ ಭೇಟಿ ವೇಳೆ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದ ಸಿದ್ದರಾಮಯ್ಯ, ರಾಹುಲ್ ರಾಷ್ಟ್ರೀಯ ಅಧ್ಯಕ್ಷರಾಗಬೇಕು ಎಂಬ ಮಾತನ್ನು ಹೇಳಿದ್ದರು. ಅಲ್ಲದೆ ಪ್ರಿಯಾಂಕಾ ಗಾಂಧಿ ಅವರಿಗೆ ಮನವಿ ಮಾಡಿ ತಮ್ಮ ಆಪ್ತ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ರನ್ನು ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುವಂತೆ ಮನವಿ ಮಾಡಿದ್ದರು. ಇದಕ್ಕೂ ಪ್ರಿಯಾಂಕಾ ಗಾಂಧಿ ಸ್ಪಂದಿಸಿದ್ದು, ಜಮೀರ್ ಅಹ್ಮದ್ ಖಾನ್ರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಕೂಡಲೇ ಅವರಿಗೆ ದಿಲ್ಲಿಗೆ ಬರಲು ತಿಳಿಸಿ ಎಂದು ಹೇಳಿ ಕಳುಹಿಸಿದ್ದರು. ಸಿದ್ದರಾಮಯ್ಯ ವಾಪಸ್ ಬೆಂಗಳೂರು ತಲುಪುತ್ತಿದ್ದಂತೆ ಜಮೀರ್ ಅಹ್ಮದ್ ಖಾನ್ ರನ್ನು ಕರೆಸಿಕೊಂಡು ಮಾಹಿತಿ ನೀಡಿದ್ದಾರೆ. ಸದ್ಯ ಜಮೀರ್ ದೆಹಲಿಯಲ್ಲಿ ಪ್ರಿಯಾಂಕಾ ಗಾಂಧಿ ಭೇಟಿಗಾಗಿ ಕಾಯುತ್ತಿದ್ದಾರೆ.
ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ತಮ್ಮ ಆಶಯವನ್ನು ಹೈಕಮಾಂಡ್ ನಾಯಕರ ಮುಂದಿಟ್ಟು ಈಡೇರಿಸಿಕೊಳ್ಳುವಲ್ಲಿ ಸಫಲರಾಗುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಗಾಂಧಿ ಕುಟುಂಬದ ಬಣ್ಣನೆ ಆರಂಭಿಸಿದ್ದು, ಮುಂಬರುವ ದಿನಗಳಲ್ಲಿ ರಾಹುಲ್ ಗಾಂಧಿ ಅವರೇ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂದು ಪದೇ ಪದೇ ಹೇಳುತ್ತಿದ್ದಾರೆ.
ಇದನ್ನೂ ಓದಿ: ಕಲಬುರಗಿಯ ಹಲವೆಡೆ ಮತ್ತೆ ಕಂಪಿಸಿದ ಭೂಮಿ: ಮನೆಯಿಂದ ಹೊರಗೆ ಓಡಿಬಂದ ಜನ