ಬೆಂಗಳೂರು: ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಸಹ ನಗರದಲ್ಲಿ ಸಾರ್ವಜನಿಕರೊಂದಿಗೆ ಸಂವಾದ ಮುಂದುವರೆಸಿದರು. ನಿನ್ನೆಯಷ್ಟೇ ನಗರದಲ್ಲಿ ವಿವಿಧ ಆಹಾರ ವಿತರಣಾ ಸಂಸ್ಥೆಗಳ ಪಾಲುದಾರರು ಹಾಗೂ ವಿತರಕರೊಂದಿಗೆ ಸಮಾಲೋಚಿಸಿ ಅವರ ಕಷ್ಟ, ಸಮಸ್ಯೆಗಳನ್ನು ಆಲಿಸಿದ್ದ ರಾಹುಲ್ ಗಾಂಧಿ, ಇಂದು ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕೆಫೆ ಕಾಫಿ ಡೇಗೆ ಭೇಟಿ ನೀಡಿದರು. ಗ್ರಾಹಕರ ಜತೆ ಕೆಲಕಾಲ ಸಮಾಲೋಚಿಸಿದ ಅವರು ಕಾಫಿ ಸವಿದರು.
ನೇರವಾಗಿ ಕಾಫಿ ಡೇನಿಂದ ಹೊರಟು ಸಮೀಪದಲ್ಲೇ ಇದ್ದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದರು. ಕಾಲೇಜಿಗೆ ಹೋಗುವ ಮತ್ತು ಕೆಲಸ ಮಾಡುವ ಮಹಿಳೆಯರ ಗುಂಪನ್ನು ಭೇಟಿಯಾಗಿ ಮಾತನಾಡಿದರು. ಇಲ್ಲಿಯೂ ಸಹ ವಿದ್ಯಾರ್ಥಿನಿಯರು ಹಾಗೂ ಕೆಲಸಕ್ಕೆ ತೆರಳುವ ಮಹಿಳೆಯರು ಎದುರಿಸುತ್ತಿರುವ ಸವಾಲು, ಬಸ್ನಲ್ಲಿ ಸಂಚರಿಸುವಾಗ ಎದುರಾಗುವ ಕಿರಿಕಿರಿ, ಶಿಕ್ಷಣ ಪಡೆಯಲು ಪಡುತ್ತಿರುವ ಕಷ್ಟ, ಆಯಾಸ, ಕೌಟುಂಬಿಕವಾಗಿ ಇವರ ಮೇಲಿರುವ ಜವಾಬ್ದಾರಿ, ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುತ್ತಿರುವ ಗಮನ ಇತ್ಯಾದಿ ವಿಚಾರವನ್ನು ಕೇಳಿ ತಿಳಿದುಕೊಂಡರು.
ಮಹಿಳೆಯರೊಂದಿಗೆ ಬಸ್ ಹತ್ತಿದ ಅವರು, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಕಾಂಗ್ರೆಸ್‌ನ ಭರವಸೆ ಕುರಿತು ಮಾತನಾಡಿದರು. ಗೃಹಲಕ್ಷ್ಮಿ (ಮಹಿಳೆಯರಿಗೆ ಮನೆಯ ಮುಖ್ಯಸ್ಥರಿಗೆ ₹ 2000) ಖಾತರಿಯ ಬಗ್ಗೆಯೂ ಅವರು ಸ್ವತಃ ಮಹಿಳೆಯರಿಂದ ಮಾಹಿತಿ ಪಡೆದುಕೊಂಡರು. ಮಹಿಳೆಯರು ಸಾರಿಗೆ ಸಮಸ್ಯೆಗಳ ಬಗ್ಗೆ ಹೇಳಿದರು. ತಮ್ಮ ಬಜೆಟ್ ಮೇಲೆ ಪರಿಣಾಮ ಬೀರುವ ಬೆಲೆ ಏರಿಕೆ ವಿಚಾರವಾಗಿಯೂ ಚರ್ಚಿಸಿದರು. ಬೆಲೆ ಏರಿಕೆ ಸಮಸ್ಯೆ ಹಾಗೂ ದೈನಂದಿನ ಬದುಕಿನಲ್ಲಿ ಎದುರಾಗುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಿದರು.
ಲಿಂಗರಾಜಪುರಂನಲ್ಲಿ ಬಸ್‌ನಿಂದಿಳಿದ ರಾಹುಲ್ ಗಾಂಧಿ, ಬಸ್ ನಿಲ್ದಾಣದಲ್ಲಿ ಮಹಿಳೆಯರೊಂದಿಗೆ ಮತ್ತೆ ಮಾತನಾಡಿ ಮಾಹಿತಿ ಕಲೆ ಹಾಕಿದರು. ಜನರ ನಡುವೆ ಸಂಚರಿಸಿ ನೇರವಾಗಿ ಅವರಿಂದ ಮಾಹಿತಿ ಪಡೆಯುತ್ತಿದ್ದಾರೆ. ಕಳೆದ ಎರಡು ದಿನದಿಂದ ಜನರ ಮಾಹಿತಿ ಪಡೆಯುವ ಜತೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಭರವಸೆಗಳ ಬಗೆಗೂ ಮಾಹಿತಿ ನೀಡುತ್ತಿದ್ದಾರೆ.
ಆಹಾರ ವಿತರಣಾ ಸಿಬ್ಬಂದಿಯೊಂದಿಗೆ ಸಂಚಾರ: ನಿನ್ನೆ(ಭಾನುವಾರ) ಬೆಂಗಳೂರಿನಲ್ಲಿ ಆಹಾರ ವಿತರಣಾ ಸಿಬ್ಬಂದಿ ದ್ವಿಚಕ್ರ ವಾಹನದಲ್ಲಿ ಹಾಫ್ ಹೆಲ್ಮೆಟ್ ಧರಿಸಿ ಸಂಚರಿಸುವ ಮೂಲಕ ರಾಹುಲ್ ಗಾಂಧಿ ನೋಡುಗರನ್ನು ಅಚ್ಚರಿಗೊಳಿಸಿದ್ದರು. ನಗರದ ಏರ್ಲೈನ್ಸ್ ಹೋಟೆಲ್ನಿಂದ ಶಾಂಗ್ರಿಲಾ ತನಕ ಆಹಾರ ವಿತರಣಾ ಸಿಬ್ಬಂದಿ ಜತೆ ಸಂವಾದ ನಡೆಸುತ್ತ ಸಾಗಿದ್ದರು. ಆಹಾರ ವಿತರಣಾ ಸಿಬ್ಬಂದಿಯ ಕಷ್ಟ, ಸುಖಗಳ ವಿಚಾರ ಕೇಳಿದ ರಾಹುಲ್ ಗಾಂಧಿ, ಸರಳತೆ ಮೆರೆದು ಕರ್ನಾಟಕ ಜನತೆಯ ಗಮನ ಸೆಳೆದಿದ್ದರು.
ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್ ದ್ವಿಚಕ್ರ ವಾಹನದಲ್ಲಿ ರಾಹುಲ್ ಗಾಂಧಿ ಸಂಚಾರ.. ಸಂವಾದ