ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿರುವ ನಟಿ ರಾಗಿಣಿಗೆ ಮೇಲಿಂದ ಮೇಲೆ ಹೊಡೆತ ಬೀಳುತ್ತಿದೆ. ಕ್ಲೀನ್ ಹ್ಯಾಂಡ್ ಆಗಿ ಬರ್ತೀನಿ ಎಂದುಕೊಂಡಿದ್ದ ರಾಗಿಣಿಯ ಕನಸು ಭಗ್ನವಾಗಿದೆ. ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುವ ಚಾರ್ಜ್‌ಶೀಟ್ ಆಧಾರದ ಮೇಲೆ ಜಾಮೀನಿಗೆ ಅರ್ಜಿ ಹಾಕಲು ಮುಂದಾಗಿದ್ದರು. ಈಗಾಗಲೇ ಸುಪ್ರೀಂಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಲಾಗಿದೆ.
ಆದರೆ, ಅಲ್ಲಿ ಇನ್ನೂ ವಿಚಾರಣೆಗೆ ಬಾರದ ಹಿನ್ನೆಲೆ ಸಿಸಿಬಿ ಕೆಳ ನ್ಯಾಯಾಲಯಕ್ಕೆ ಸಲ್ಲಿಸುವ ಚಾರ್ಜ್‌ಶೀಟ್ ಆಧಾರದ ಮೇಲೆ ಜಾಮೀನು ಪಡೆಯಲು ಮುಂದಾಗಿದ್ರು. ಆದ್ರೆ, ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದ ಸಿಸಿಬಿ ಇನ್ನೂ ಆರೋಪಪಟ್ಟಿ ಸಲ್ಲಿಕೆ ಮಾಡಿಲ್ಲ.
ತನಿಖೆಯ ದೋಷಾರೋಪ ಪಟ್ಟಿ ಕೋರ್ಟ್ಗೆ ಸಲ್ಲಿಸದ ಕಾರಣ ಜೈಲಿನಲ್ಲೇ ರಾಗಿಣಿ ಉಳಿದಿದ್ದಾರೆ. ಕಾಟನ್ಪೇಟೆ ಮತ್ತು ಬಾಣಸವಾಡಿ ಡ್ರಗ್ಸ್ ಕೇಸ್ಗೆ ಸಂಬಂಧಿಸಿದಂತೆ ಪ್ರತ್ಯೇಕ ಚಾರ್ಜ್ಶೀಟ್ನ ರಾಗಿಣಿ ವಿರುದ್ಧ ಸಿಸಿಬಿ ಪೊಲೀಸರು ಸಲ್ಲಿಸಲಿದ್ದಾರೆ. ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದ ಬಳಿಕ 2018ರಲ್ಲಿ ನಡೆದ ಬಾಣಸವಾಡಿ ಡ್ರಗ್ಸ್ ಪ್ರಕರಣದಲ್ಲಿ ಕೂಡ ರಾಗಿಣಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಚಾರ್ಜ್‌ಶೀಟ್ ಸಲ್ಲಿಸಲು ತಡ ಯಾಕೆ?: ಈಗಾಗಲೇ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಸಂಜನಾ, ರಾಗಿಣಿ ಸೇರಿದಂತೆ ಕೆಲ ಆರೋಪಿಗಳು ಸಿಕ್ಕಿದ್ದಾರೆ. ಆದ್ರೆ, ಪ್ರಮುಖ ಇಬ್ಬರು ಆರೋಪಿಗಳು ಇನ್ನೂ ಸಿಕ್ಕಿಲ್ಲ. ಅವರ ಹುಡುಕಾಟ ನಿರಂತರವಾಗಿ ನಡೆಯುತ್ತಿದೆ.
ಇತ್ತೀಚೆಗೆ ಪ್ರಕರಣದ 12ನೇ ಆರೋಪಿ ವಿನಯ್ನನ್ನು ಬಂಧಿಸಲಾಗಿತ್ತು. ಅದರಂತೆ ಶಿವಪ್ರಕಾಶ್ ಹಾಗೂ ಆದಿತ್ಯಾ ಆಳ್ವಾ ಸಿಗುವ ಭರವಸೆಯಲ್ಲಿರುವ ಸಿಸಿಬಿ, ಈ ಇಬ್ಬರು ಸಿಕ್ಕರೆ ಒಟ್ಟಿಗೆ ಅವರ ವಿರುದ್ಧ ಸಹ ಚಾರ್ಜ್‌ಶೀಟ್ ಹಾಕಬಹುದು ಎಂದು ಯೋಚಿಸುತ್ತಿದೆ.