ಬೆಂಗಳೂರು: ಹಿಜಾಬ್ ಹಾಕಲು ಪಟ್ಟು ಹಿಡಿದ ವಿದ್ಯಾರ್ಥಿನಿಯರಿಗೆ ಗುಪ್ತ ಸ್ಥಳದಲ್ಲಿ ತರಬೇತಿ ನೀಡಲಾಗಿತ್ತು ಎಂದು ಉಡುಪಿ ಶಾಸಕ ರಘುಪತಿ ಭಟ್ ಹಿಜಾಬ್ ಘಟನೆ ಬಗ್ಗೆ ವಿವರಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಹಿಜಾಬ್ ಗಲಾಟೆಯಲ್ಲಿ ತೊಡಗಿದ 12 ಮಕ್ಕಳಿಗೆ ಗುಪ್ತ ಸ್ಥಳದಲ್ಲಿ ಟ್ರೈನಿಂಗ್ ನೀಡಲಾಗಿದೆ. ಅಲ್ಲಿ ಅವರಿಗೆ ವಿಪರೀತ ಧರ್ಮಾಂಧತೆಯ ಪಾಠ ನೀಡಲಾಗಿದೆ.
ಈ ಆರು ಹೆಣ್ಣುಮಕ್ಕಳಿಗೆ ಸುಧಾರಿತ ತರಬೇತಿ ನೀಡಿದ್ದಾರೆ. ನೀವು ಎಷ್ಟೇ ಸಾಮರಸ್ಯ ತರುವ ಯತ್ನ ಮಾಡಿದರೂ ಈ ಸಿಎಫ್ಐನವರು ಅದಕ್ಕೆ ಅವಕಾಶ ನೀಡುವುದಿಲ್ಲ. ಹಾಗಾಗಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕರು ಆಗ್ರಹಿಸಿದರು.
ಎಬಿವಿಪಿ ಪ್ರತಿಭಟನೆ ಕಾರಣ:1995 ರಿಂದ ಉಡುಪಿ ಮಹಿಳಾ ಪಿಯು ಕಾಲೇಜಿನಲ್ಲಿ ಸಮವಸ್ತ್ರ ಸಂಹಿತೆ ಜಾರಿಯಾಗಿದೆ. ಕಾಲೇಜು ಒಳಗೆ, ಆವರಣದಲ್ಲಿ ಹಿಜಾಬ್ ಹಾಕಲು ಅವಕಾಶ ಇತ್ತು. ಆದರೆ, ತರಗತಿ ಒಳಗೆ ಹಿಜಾಬ್ ತೆಗೆದು ಇಡುತ್ತಿದ್ದರು. ಒಂದೂವರೆ ವರ್ಷದಿಂದ ಅವರು ಹಿಜಾಬ್ ತೆಗೆದು ಬರುತ್ತಿದ್ದರು. ಹಿಜಾಬ್ ಗಲಾಟೆಗೆ ಆಗಸ್ಟ್,ಸೆಪ್ಟೆಂಬರ್ನಲ್ಲಿ ಎಬಿವಿಪಿಯವರು ನಡೆಸಿದ ಪ್ರತಿಭಟನೆ ಪ್ರಮುಖ ಕಾರಣ. ಎಂಐಟಿಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಆ ಪ್ರತಿಭಟನೆಯಲ್ಲಿ ಈ 12 ಮುಸ್ಲಿಂ ವಿದ್ಯಾರ್ಥಿನಿಯರೂ ಭಾಗಿಯಾಗುತ್ತಾರೆ. ಎಬಿವಿಪಿ ಪ್ರತಿಭಟನೆಯಲ್ಲಿ ಈ ವಿದ್ಯಾರ್ಥಿಗಳು ನೋಡಿದ ಸಿಎಫ್ಐ ಅವರನ್ನು ಸಂಪರ್ಕ ಮಾಡಿ ಅವರ ಮೇಲೆ ಒತ್ತಡ ಹಾಕುತ್ತಾರೆ ಎಂದು ವಿವರಿಸಿದರು.
ಹಿಜಾಬ್ಗೆ ಪಟ್ಟು ಹಿಡಿದ ವಿದ್ಯಾರ್ಥಿನಿಯರು: ಡಿಸೆಂಬರ್.28ರಲ್ಲಿ ನಮ್ಮ ಮಕ್ಕಳಿಗೆ ಹಿಜಾಬ್ ಹಾಕಲು ಅವಕಾಶ ಮಾಡಿ ಕೊಡಬೇಕು ಎಂದು ಪೋಷಕರು ವಿನಂತಿ ಮಾಡುತ್ತಾರೆ. ಆಗ ಪೋಷಕರಿಗೆ ಉಪನ್ಯಾಸಕರು ಅದು ಆಗಲ್ಲ. ಡ್ರೆಸ್ ಕೋಡ್ ಪ್ರಕಾರ ಆಗಬೇಕು ಎಂದು ಮನವರಿಕೆಗೆ ಯತ್ನಿಸುತ್ತಾರೆ. ಆಗ 12 ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ಹಿಜಾಬ್ ಹಾಕಲೇ ಬೇಕು ಎಂದು ಪಟ್ಟು ಹಿಡಿಯುತ್ತಾರೆ. ಆದರೆ, ಡಿಸೆಂಬರ್ 30ಕ್ಕೆ ಈ ಆರು ವಿದ್ಯಾರ್ಥಿನಿಯರು ಲಿಖಿತ ರೂಪದಲ್ಲಿ ನಮಗೆ ಹಿಜಾಬ್ ಹಾಕಲು ಅವಕಾಶ ಮಾಡಿಕೊಡಬೇಕು ಎಂದು ಕೇಳುತ್ತಾರೆ. ಆಗ ಕಾಲೇಜಿನವರು ಇದು ಸಾಧ್ಯವಿಲ್ಲ ಅಂತಾರೆ. ಮರು ದಿನ ಈ ಸುದ್ದಿ ಪಾಕಿಸ್ತಾನದ ಟಿವಿಯಲ್ಲಿ ಬರುತ್ತದೆ. ಉಡುಪಿಯಲ್ಲಿ ಹಿಜಾಬ್ ಬ್ಯಾನ್ ಎಂದು ಸುದ್ದಿಯಾಗುತ್ತದೆ ಎಂದು ಆರೋಪಿಸಿದರು.
ಯಾವುದಕ್ಕೂ ಒಪ್ಪದ ಮಕ್ಕಳು: ಜನವರಿ.1ರಂದು ಸಭೆ ನಡೆಸುತ್ತೇನೆ. ಡಿಡಿಪಿಐನ್ನು ಕರೆದೊಯ್ದು ಆಗ ಈ ರೀತಿ ಮಾಡಬಾರದು ಎಂದು ಮನವಿ ಮಾಡುತ್ತೇವೆ. ಅದಕ್ಕೆ ಅವರು ಒಪ್ಪಲ್ಲ. ಬಳಿಕ ಸರ್ಕಾರಕ್ಕೆ ಸ್ಪಷ್ಟೀಕರಣ ಕೇಳೋಣ. ಸರ್ಕಾರ ಏನು ಹೇಳುತ್ತೆ ಅದನ್ನು ಪಾಲನೆ ಮಾಡೋಣ. ಅಲ್ಲಿವರೆಗೆ ಸುಮ್ಮನಿರಿ ಅಂತ ಮನವಿ ಮಾಡುತ್ತೇವೆ. ಆದರೆ, ಮಾರನೇ ದಿನ ಮತ್ತೆ ಆ ಆರು ವಿದ್ಯಾರ್ಥಿನಿಯರು ಗಲಾಟೆ ಮಾಡುತ್ತಾರೆ. ಕಾಂಗ್ರೆಸ್ ಮುಖಂಡರು ಬಂದು ಮನವರಿಕೆ ಮಾಡುತ್ತಾರೆ. ಮುಸ್ಲಿಂ ಮುಖಂಡರು ಮನವರಿಕೆ ಯತ್ನ ಮಾಡುತ್ತಾರೆ. ಅದಕ್ಕೆ ಯಾವುದಕ್ಕೂ ಆರು ಹೆಣ್ಣು ಮಕ್ಕಳು ಒಪ್ಪುವುದಿಲ್ಲ ಎಂದು ವಿವರಿಸಿದರು.
ಜನವರಿ.25ರಂದು ಸರ್ಕಾರದಿಂದ ಸ್ಪಷ್ಟೀಕರಣ ಬರುತ್ತದೆ. ಇದರ ಬಗ್ಗೆ ಉನ್ನತ ಮಟ್ಟದ ಸಮಿತಿ ಮಾಡುತ್ತೇವೆ. ಅಲ್ಲಿವರೆಗೆ ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡುತ್ತದೆ. ಆ ಬಗ್ಗೆ ಪೋಷಕರು, ವಿದ್ಯಾರ್ಥಿನಿಗಳನ್ನು ಕರೆದು ಮನವರಿಕೆ ಮಾಡಲಾಯಿತು. ಆದರೆ, ಮರುದಿನ ಮತ್ತೆ ಗಲಾಟೆ ಶುರುವಾಯಿತು. ಉಡುಪಿಯಲ್ಲಿ ಏನೂ ಮಾಡಲು ಆಗುವುದಿಲ್ಲ ಅಂದಾಗ ಸಿಎಫ್ಐ ಅವರು ಕುಂದಾಪುರದ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಹೋಗಿ ಕುಮ್ಮಕ್ಕು ಕೊಡುತ್ತಾರೆ. ಬಳಿಕ ಅಲ್ಲಿ 27 ವಿದ್ಯಾರ್ಥಿನಿಯರು ಹಿಜಾಬ್ ಹಾಕಿ ಕಾಲೇಜಿಗೆ ಬರುತ್ತಾರೆ. ಅದಾದ ಬಳಿಕ ಹಿಂದೂ ವಿದ್ಯಾರ್ಥಿಗಳು ಕೇಸರಿ ಹಾಕಿಕೊಂಡು ಬರುತ್ತಾರೆ ಎಂದು ತಿಳಿಸಿದರು.
ಅಕ್ಟೋಬರ್ ಅಂತ್ಯಕ್ಕೆ ಟ್ವಿಟರ್ ಖಾತೆ :ಈ ಆರು ಮಂದಿ ವಿದ್ಯಾರ್ಥಿನಿಯರು ಯಾರ ಮಾತಿಗೆ ಒಪ್ಪಿಲ್ಲ. ಸಿಎಫ್ಐ ಮಾತು ಕೇಳಿ ಹಿಜಾಬ್ಗೆ ಹಠ ಹಿಡಿದರು. ಆ ಮಕ್ಕಳು ಬಹಳ ಶಿಸ್ತಿನವರಾಗಿದ್ದರು. ಆದರೆ, ಯಾವತ್ತು ಸಿಎಫ್ಐ ಸಂಪರ್ಕಕ್ಕೆ ಬಂದ್ರು ಆವಾಗ ಈ ಸಮಸ್ಯೆ ಶುರುವಾಯಿತು. ಅಕ್ಟೋಬರ್ನಿಂದ ಆ ಮಕ್ಕಳ ಮನಸ್ಸನ್ನು ಹಾಳು ಮಾಡಿದ್ದಾರೆ. ಎಂಟು ವಿದ್ಯಾರ್ಥಿನಿಯರು ಅಕ್ಟೋಬರ್ ಅಂತ್ಯಕ್ಕೆ ಟ್ವಿಟರ್ ಖಾತೆ ತೆಗೆಯುತ್ತಾರೆ.
ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬಾಬರ್ ಮಸೀದಿ, ರಾಮ ಟೆಂಪಲ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದು ರಾಜಕೀಯ ಲಾಭಕ್ಕಾಗಿ ಮಾಡಿದ ಘಟನೆ ಅಲ್ಲ. ನಮ್ಮ ಉಡುಪಿಯ ಮುಸಲ್ಮಾನ ಮುಖಂಡರಿಂದ ಸಮಸ್ಯೆ ಉಲ್ಬಣವಾಗಿಲ್ಲ. ಹೈದರಾಬಾದಿನಿಂದ ಟೀಂ ಬಂದು ಸಮಸ್ಯೆಯನ್ನು ಉಲ್ಬಣಿಸಿತು. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಹಾಗಾಗಿ ಇದರ ಸಂಬಂಧ ಉನ್ನತ ಮಟ್ಟದ ತನಿಖೆ ಆಗಬೇಕು ಎಂಬುದು ನನ್ನ ಒತ್ತಾಯ ಎಂದರು.
ಬೀದಿ ಬದಿ ವ್ಯಾರಿಗಳಿಗೆ ಯಾರೂ ಅಡ್ಡಿ ಮಾಡಿಲ್ಲ: ಅಂಗಡಿ ಬ್ಯಾನ್ ವಿಚಾರವಾಗಿ ಮಾತನಾಡಿದ ಅವರು, ಬೀದಿ ಬದಿ ವ್ಯಾಪಾರಕ್ಕೆ ಯಾರೂ ಅಡ್ಡಿ ಮಾಡಿಲ್ಲ. ಕಾಪು ಮಾರಿಕಾಂಬಾ ಗುಡಿ ಜಾತ್ರೆಯಲ್ಲಿ ಕೋಳಿ ಕೊಯ್ಯುವ ಪದ್ಧತಿ ಇದೆ. ಕೋಳಿಯನ್ನು ಏಲಂ ಹಾಕಿ ಅಂಗಡಿಗಳನ್ನು ಕೊಡುತ್ತಾರೆ. ಅದನ್ನು ದೇವಸ್ಥಾನದ ಆಡಳಿತ ಮಂಡಳಿಯೇ ಮಾಡುತ್ತಾರೆ. ಈ ಬಾರಿ ಆಡಳಿತ ಮಂಡಳಿ ದೇವಸ್ಥಾನದ ಆವರಣದಲ್ಲಿ ನಾವು ಅನ್ಯ ಧರ್ಮವರಿಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿತು. ಮೊನ್ನೆ ಬಂದ್ ಆದಾಗ ಕೆಲವರು ಹಿಂದೂಗಳ ಅಂಗಡಿಗಳನ್ನು ಬಲವಂತವಾಗಿ ಮುಚ್ಚಲು ಹೋದರು. ಅದು ಸಮಸ್ಯೆಗೆ ಕಾರಣವಾಯಿತು ಎಂದರು.
ಇದನ್ನೂ ಓದಿ: ಹಂತ ಹಂತವಾಗಿ 2.5 ಲಕ್ಷ ಹುದ್ದೆ ಭರ್ತಿ, ಕೆಪಿಎಸ್ಸಿಗೆ ಕಾಯಕಲ್ಪ: ಸಿಎಂ ಬೊಮ್ಮಾಯಿ