ಬೆಂಗಳೂರು : ಆರ್‌ಎಸ್‌ಎಸ್ ಬಗ್ಗೆ ಮಾತಾಡಿದರೆ ಹುಷಾರ್..! ಪ್ಯಾಂಟೂ, ಚಡ್ಡಿ ಸುಡೋದನ್ನೆಲ್ಲ ಬಿಟ್ಟು ಬಿಡಿ. ಆರ್‌ಎಸ್‌ಎಸ್ ತಂಟೆಗೆ ಬಂದರೆ ಸುಟ್ಟು ಹೋಗ್ತೀರಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿ ಸುಡೋರೆಲ್ಲ ಮನೆ ಸುಟ್ಟುಕೊಂಡಿದ್ದಾರೆ. ಆಂಜನೇಯನ ಬಾಲಕ್ಕೆ ಬೆಂಕಿ ಬಿದ್ದು, ಇಡೀ ಲಂಕೆಯೇ ಸುಟ್ಟು ಹೋಯಿತು. ಆರ್‌ಎಸ್‌ಎಸ್ ಶಕ್ತಿ ಏನು ಎಂದು ಪ್ರಪಂಚಕ್ಕೆ ಗೊತ್ತಿದೆ. ಸ್ವಲ್ಪ ಹುಷಾರಾಗಿರಿ.
ನೀವೇ ಬಾದಾಮಿಯಲ್ಲಿ ಸ್ವಲ್ಪ ಅಂತರದಿಂದ ಗೆದ್ದಿದ್ದೀರಿ. ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಕ್ಷೇತ್ರ ಹುಡುಕ್ತಿದ್ದೀರಿ. ಅಂತದ್ದರಲ್ಲಿ ಈಗ ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡಿದರೆ, ನೀವು ಚುನಾವಣೆಯಲ್ಲೂ ಸೋಲ್ತಿರಿ. ಕೇವಲ ಸೋನಿಯಾ ಗಾಂಧಿ ಮೆಚ್ಚಿಸಲು ಹೋಗಿ, ನೀವು ಚುನಾವಣೆಯಲ್ಲಿ ಸುಟ್ಟು ಹೋಗ್ತಿರಿ ಹುಷಾರ್! ಎಂದು ಸಿದ್ದರಾಮಯ್ಯಗೆ ಎಂದರು.
ರಾಜ್ಯಸಭೆ ಮೂರನೇ ಅಭ್ಯರ್ಥಿ ಗೆಲ್ಲುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಆರ್ ಅಶೋಕ್, ನಮ್ಮ ಬಳಿ ಅಗತ್ಯ ಮತಗಳು ಇರೋದಕ್ಕೆ ಮೂರನೇ ಅಭ್ಯರ್ಥಿ ಹಾಕಿದ್ದೇವೆ. ನೂರಕ್ಕೂ ನೂರರಷ್ಟು ಮೂರು ಅಭ್ಯರ್ಥಿಗಳು ಆಯ್ಕೆ ಆಗುತ್ತಾರೆ. ಈಗಾಗಲೇ ಅಭ್ಯರ್ಥಿಗಳನ್ನು ಗೆಲ್ಲಿಸಲು ನಮ್ಮ ನಾಯಕರೆಲ್ಲರೂ ಸೇರಿ ಫೀಲ್ಡ್ಗೆ ಇಳಿದಿದ್ದೇವೆ.
ಇಲ್ಲಿ ಕಾಂಗ್ರೆಸ್, ಜೆಡಿಎಸ್ ಅನಾವಶ್ಯಕವಾಗಿ ಅಭ್ಯರ್ಥಿಗಳನ್ನು ಹಾಕಿದ್ದಾರೆ. ಒಂದು ಕಡೆ ನಿತ್ಯ ಇಬ್ಬರು ಕಿತ್ತಾಡ್ತಾರೆ, ಇನ್ನೊಂದು ಕಡೆ ಅವರು ಇವರನ್ನು ಮತ ಕೇಳಿದ್ದೇವೆ ಅಂತಾರೆ. ಕೊನೆಗೆ ಇದು ಯಾವುದು ವರ್ಕೌಟ್ ಆಗಲ್ಲ. ನಿಜವಾಗಿಯೂ ಮತದಾನ ನಡೆಯೋದು ವೋಟ್ ಮೇಲೆ, ಮತದಾನದ ವ್ಯಾಲ್ಯೂ ಮೇಲೆ, ಎರಡನೇ ಪ್ರಾಶಸ್ತ್ಯದ ಮತ, ಮೂರನೇ ಪ್ರಾಶಸ್ತ್ಯದ ಮತ ಮೌಲ್ಯಗಳ ಮೇಲೆ ಚುನಾವಣೆ ನಡೆಯೋದು. ನಮಗೆ 122 ಮತಗಳು ಇವೆ. ಸುಲಭವಾಗಿ ಗೆಲ್ಲುವ ವಿಶ್ವಾಸ ಇದೆ ಎಂದರು.
ಓದಿ: 9ನೇ ತರಗತಿ ಪುಸ್ತಕದಲ್ಲಿ ಅಂಬೇಡ್ಕರ್ 'ಸಂವಿಧಾನ ಶಿಲ್ಪಿ' ಎಂಬುದನ್ನೇ ತೆಗೆದು ಹಾಕಿದ್ದಾರೆ : ಡಿಕೆಶಿ ಆಕ್ರೋಶ