ಬೆಂಗಳೂರು : ಬುಲೆಟ್ ಪ್ರಕಾಶ್ ಅಂತಿಮ ದರ್ಶನಕ್ಕೆ ಗಣ್ಯರು ಹಾಗೂ ಸಾರ್ವಜನಿಕರಿಗೂ ಅವಕಾಶವಿಲ್ಲ ಎಂದ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಬುಲೆಟ್ ಪ್ರಕಾಶ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ನಂತರ ಮಾತನಾಡಿo ಅವರು, ಬುಲೆಟ್ ಪ್ರಕಾಶ್ ನನ್ನ ಒಳ್ಳೆಯ ಗೆಳೆಯ. ಪ್ರತಿ ತಿಂಗಳು ಇಬ್ಬರು ಭೇಟಿ ಮಾಡ್ತಿದ್ವಿ. ಲೀವರ್ ಟ್ರಾನ್ಸ್‌ಫಾರ್ಮೇಷನ್ ಆಗ್ಬೇಕು, ಸಹಾಯ ಮಾಡುವಂತೆ ಕೇಳಿದ್ರು, ನಾನು ಒಪ್ಪಿಕೊಂಡಿದ್ದೆ. ಆದ್ರೀಗ ಅವರೇ ಇಲ್ಲ, ಅವರು ಇವತ್ತು ನಮ್ಮೊಟ್ಟಿಗೆ ಇಲ್ಲ ಅನ್ನೋದು ದುಃಖ ತಂದಿದೆ. ಸಿಎಂ ಎರಡು ಲಕ್ಷ ರೂಪಾಯಿ ಆಪರೇಷನ್ಗೆ ಕೊಡೋದಾಗಿ ಒಪ್ಪಿದ್ರು. ಆದರೆ, ಲಾಕ್‌ಡೌನ್ ಕಾರಣ ಆ ಹಣ ಅವರ ಕೈ ಸೇರಿರಲಿಲ್ಲ ಎಂದರು.
ಅಲ್ಲದೇ ಇಂದು ಅವರ ಪಾರ್ಥೀವ ಶರೀರವನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ನಾಳೆ ಕೆಂಪಾಪುರ ಮನೆಯ ಬಳಿ ತೆಗೆದುಕೊಂಡು ಹೋಗಿ ಕೇವಲ ಐದು ನಿಮಿಷ ಮಾತ್ರ ಅವರ ಹತ್ತಿರದ ಸಂಬಂಧಿಕರಿಗೆ ಪಾರ್ಥೀವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗುತ್ತೆ. ನಂತರ ಹೆಬ್ಬಾಳ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದರು.
ಅಲ್ಲದೇ ಗಣ್ಯರು ಅಂತಿಮ ದರ್ಶನ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗುವುದಿಲ್ಲ. ರೂಲ್ಸ್ ಬ್ರೇಕ್ ಮಾಡೋದು ತಪ್ಪಾಗುತ್ತದೆ. ಸೆಲೆಬ್ರಿಟಿಗಳು ಸಹ ಅಂತಿಮ ದರ್ಶನ ಪಡೆಯುವಂತಿಲ್ಲ. ಸಂಬಂಧಿಕರಿಗಷ್ಟೇ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅದೂ ಕೂಡ ಕಡಿಮೆ ಜನರಿಗೆ ಮಾತ್ರ ಅವಕಾಶವಿದೆ. ಲಾಕ್‌ಡೌನ್ ಮುಗಿದ ನಂತರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಅಭಿಮಾನಿಗಳು ದೂರದಿಂದಲೇ ಪ್ರಕಾಶ್ಗೆ ನಮನ ಸಲ್ಲಿಸುವಂತೆ ಆರ್.ಅಶೋಕ್ ಜನರಲ್ಲಿ ಮನವಿ ಮಾಡಿದರು.