ಬೆಂಗಳೂರು: ರಾಜಭವನವನ್ನು ಯಾವ ಕಾರಣಕ್ಕೂ ಬಿಜೆಪಿ ದುರುಪಯೋಗೊಡಿಸಿಕೊಳ್ಳುವುದಿಲ್ಲ. ಅದೇನಿದ್ದರೂ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಅವರು ಡಿಸಿಎಂ ಪರಮೇಶ್ವರ್ಗೆ ತಿರುಗೇಟು ನೀಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಭವನಕ್ಕೆ ಹೋದಾಗ ಚಹಾ, ತಿಂಡಿ ಕೊಡುವುದು ಸಾಮಾನ್ಯ. ಕಾಂಗ್ರೆಸ್ ನವರಿಗೆ ಅಂತಹ ಉಪಚಾರ ಕೊಟ್ಟರೆ ಏನು ಆಗಲ್ಲ. ರಾಜೀನಾಮೆ ಕೊಡಲು ಹೋದವರಿಗೆ ಚಹಾ, ತಿಂಡಿ ಕೊಟ್ಟರೆ ರಾಜಭವನ ದುರುಪಯೋಗವೇ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯಪಾಲರ ಬಗ್ಗೆ ಈ ರೀತಿ ಹೇಳಿಕೆ ಕೊಟ್ಟಿರೋದು ಸರಿಯಲ್ಲ. ಕಾಂಗ್ರೆಸ್ನವರು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ರಾಜಭವನದವನ್ನು ಯಾವ ರೀತಿ ದುರ್ಬಳಕೆ ಮಾಡಿಕೊಂಡಿದ್ದೀರಿ ಅನ್ನೋದು ಗೊತ್ತಿದೆ. ಕಳೆದ 70 ವರ್ಷಗಳಿಂದ ರಾಜಭವನವನ್ನು ಹೇಗೆಲ್ಲಾ ಬಳಕೆ ಮಾಡಿಕೊಂಡಿದ್ದೀರಾ ಎಂದು ಜಗಜ್ಜಾಹೀರಾಗಿದೆ ಎಂದು ಅಶೋಕ್ ಕಿಡಿಕಾರಿದ್ದಾರೆ.
ನಿಮ್ಮ ಸಂಸ್ಕೃತಿಗೆ ನಾವು ಬರಲ್ಲ. ನಮಗೆ ನಮ್ಮದೇ ಆದ ಜವಾಬ್ದಾರಿ ಇದೆ. ನಾವು ಆ ರೀತಿ ರಾಜಭವನವನ್ನು ರಾಜಕೀಯ ಕ್ಷೇತ್ರವನ್ನಾಗಿ ಮಾಡಿಕೊಳ್ಳಲು ಹೋಗಲ್ಲ. ಇಂತಹ ಕೆಲಸವನ್ನು ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಅದೇನಿದ್ದರೂ ಕಾಂಗ್ರೆಸ್ ಸಂಸ್ಕೃತಿ. ನೀವು ಹಿಂದೆ ರಾಜಭವನ ದುರುಪಯೋಗ ಮಾಡಿಕೊಂಡ ಅನುಭವದ ಮೇಲೆ ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದೀರಿ. ಈ ರೀತಿ ಮಾತನಾಡುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಪರಮೇಶ್ವರ್ ವಿರುದ್ಧ ಮಾಜಿ ಡಿಸಿಎಂ ಗುಡುಗಿದ್ದಾರೆ.
ಪಕ್ಷೇತರ ಶಾಸಕ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದರೆ ಸರ್ಕಾರ ಯಾವ ರೀತಿ ಶಾಸಕರಿಗೆ ತೊಂದರೆ ಮಾಡಿದೆ ಎಂದು ಗೊತ್ತಾಗುತ್ತಿದೆ. ಶಾಸಕರು ಮಾತ್ರವಲ್ಲ, ಸಚಿವರೂ ಸಹ ತೊಂದರೆ ಕೊಟ್ಟಿದ್ದಾರೆ ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತಿದೆ. ಈ ಸರ್ಕಾರ ಯಾರಿಗೋಸ್ಕರ ಇದೆ? ಜನರಿಗೋಸ್ಕರ ಇಲ್ಲ. ಶಾಸಕರಿಗೂ ಇಲ್ಲ, ಸಚಿವರಿಗೂ ಇಲ್ಲ, ಅಂದರೆ ಯಾರಿಗೋಸ್ಕರ ಇದೆ ಅನ್ನೋದೇ ಅರ್ಥವಾಗುತ್ತಿಲ್ಲ ಎಂದರು.
ಅಲ್ಲದೆ ಎಲ್ಲಾ ಬೆಳವಣಿಗೆಗಳಿಗೂ ಬಿಜೆಪಿಗೆ ಯಾವುದೇ ರೀತಿಯ ಸಂಬಂಧ ಇಲ್ಲವೆಂದು ಪುನರುಚ್ಛರಿಸಿದ ಅಶೋಕ್, ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದರು.