ಬೆಂಗಳೂರು: ಪಕ್ಷದ ಆಂತರಿಕ ಸಮಸ್ಯೆಗಳ ಬಗ್ಗೆ ಯಾರೇ ಆಗಲಿ ಬಹಿರಂಗವಾಗಿ ಹೇಳಿಕೆ ನೀಡುವುದು ಬಿಜೆಪಿ ಸಂಪ್ರದಾಯಗಳಿಗೆ ವಿರುದ್ಧವಾಗಿದೆ. ಸಮಸ್ಯೆಗಳಿದ್ದರೆ ಮುಖ್ಯಮಂತ್ರಿಗಳು ಮತ್ತು ರಾಜ್ಯಾಧ್ಯಕ್ಷರ ಜೊತೆ ಮಾತನಾಡಿ ಪರಿಹರಿಸಿಕೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಕಂದಾಯ ಸಚಿವ ಆರ್. ಅಶೋಕ್ ಸಲಹೆ ನೀಡಿದ್ದಾರೆ.
ಬಾಬೂರಾವ್ ದೇಶಪಾಂಡೆ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ನಾಯಕರಾದವರಿಗೆ ತಾಳ್ಮೆ ಬಹಳ ಮುಖ್ಯ. ಯಾರೂ ಕೂಡ ತಾಳ್ಮೆ ಕಳೆದುಕೊಳ್ಳಬಾರದು. ನಮ್ಮದು ಬಿಜೆಪಿ ಸರ್ಕಾರ, ಕೇಂದ್ರದ ನಾಯಕತ್ವ ಬಹಳ ಬಲಿಷ್ಟವಾಗಿದೆ. ಹಾಗಾಗಿ ಕೇಂದ್ರ ನಾಯಕರ ಮತ್ತು ರಾಜ್ಯಾಧ್ಯಕ್ಷರ ಅನುಮತಿಯಿಲ್ಲದೆ ಯಾರೂ ಕೂಡ ಮನಸ್ಸು ಬಂದಂತೆ ಮಾತನಾಡುವುದು, ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡುವುದು ಸರಿಯಲ್ಲ.
ಯಾರೇ ಶಾಸಕರಿರಲಿ ನಿಯಮ ಉಲ್ಲಂಘನೆ ಮಾಡಬಾರದು. ಏನಾದರೂ ಸಮಸ್ಯೆ ಇದ್ದರೆ ಅದನ್ನು ಅಧ್ಯಕ್ಷರು ಹಾಗು ಸಿಎಂ ಜೊತೆ ಮಾತನಾಡಿ ಪರಿಹರಿಸಿಕೊಳ್ಳಿ. ಅದನ್ನು ಬಿಟ್ಟು ಬೀದಿಗಳಲ್ಲಿ ಮಾತನಾಡುವುದು ಒಳ್ಳೆಯದಲ್ಲ. ಅದು ಬಿಜೆಪಿ ಸಂಪ್ರದಾಯಕ್ಕೆ ವಿರುದ್ಧ ಎಂದಿದ್ದಾರೆ.
ನಾಯಕತ್ವ ಬದಲಾವಣೆ ಹೇಳಿಕೆ ನಂತರ ತಮ್ಮನ್ನು ಸಮರ್ಥಿಸಿಕೊಳ್ಳಲು ಖಾರವಾಗಿ ಟ್ವೀಟ್ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಈ ಎಲ್ಲದರ ಕುರಿತು ಯತ್ನಾಳ್ ಜೊತೆ ಮಾತನಾಡುತ್ತೇನೆ ಎಂದರು.