ಬೆಂಗಳೂರು: ನಗರದಲ್ಲಿ ಶ್ರಾವಣ ಶನಿವಾರ ಸೇರಿದಂತೆ, ಸಾಲು - ಸಾಲು ಹಬ್ಬಗಳು ಬರಲಿದ್ದು, ಖರೀದಿಗಾಗಿ ಮಾರುಕಟ್ಟೆಗಳಲ್ಲಿ ಜನಜಂಗುಳಿ ಹೆಚ್ಚಾಗಲಿದೆ. ಹೀಗಾಗಿ ನಗರದಲ್ಲಿ ಕಠಿಣ ನಿಯಮಗಳು ಜಾರಿಯಾಗುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಶ್ರಾವಣ ಶನಿವಾರ ಸೇರಿದಂತೆ ಮುಂದೆ ಎಲ್ಲ ಧರ್ಮಗಳ ಹಬ್ಬಗಳೂ ಬರಲಿವೆ. ನಗರದಲ್ಲಿ ಟಫ್ ರೂಲ್ಸ್ ಏನೇನು ತರಬೇಕು, ಹೇಗಿರಬೇಕೆಂಬ ನಿಯಮಗಳ ಬಗ್ಗೆ ಮೂರ್ನಾಲ್ಕು ದಿನಗಳಲ್ಲಿ ಸಿಎಂ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ನಗರದಲ್ಲಿ ಟಫ್ ರೂಲ್ಸ್ ತರಲೇಬೇಕಾಗುತ್ತದೆ. ಜನರ ಆರೋಗ್ಯ ಮುಖ್ಯ. ಹೀಗಾಗಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಲೆಗಳ ಆರಂಭದ ಕುರಿತು ಮಾತನಾಡಿ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ವಿಭಾಗದವರು ತೀರ್ಮಾನಿಸುತ್ತಾರೆ. ಬೇರೆ ದೇಶಗಳಲ್ಲಿ ಶಾಲೆಗಳು ಮುಚ್ಚಿಲ್ಲ. ಇಲ್ಲಿ ಯಾವುದೇ ಶಾಲೆ ತೆರೆಯುವ ಮೊದಲು ಪೋಷಕರ ಒಪ್ಪಿಗೆ ಮುಖ್ಯ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ ಶಾಲೆ ಕಡ್ಡಾಯ ಇಲ್ಲ, ಆನ್ಲೈನ್ನಲ್ಲೆ ಶಿಕ್ಷಣ ಮುಂದುವರಿಸಬಹುದು ಎಂದರು.
ಇಂದಿರಾ ಕ್ಯಾಂಟೀನ್ ಹೆಸರಿನ ಬದಲಾವಣೆ ಚರ್ಚೆ ಬಗ್ಗೆ ಮಾತನಾಡಿ, 'ಅನ್ನಪೂರ್ಣೇಶ್ವರಿ' ಎಂದು ಬದಲಾಯಿಸಲು ಅಭಿಪ್ರಾಯ ಬಂದಿದೆ, ಆದರೆ ಚರ್ಚೆಯಾಗಿಲ್ಲ. ಯಾವುದೇ ತೀರ್ಮಾನ ಆಗಿಲ್ಲ ಎಂದರು.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ವಿಸ್ತ್ರತ ಚರ್ಚೆಯಾಗಿದೆ. ಕೋವಿಡ್ ಏರಿಕೆಯಾಗುವ ಸಾಧ್ಯತೆ ಇದ್ದರೆ ಸರ್ಕಾರದ ಗಮನಕ್ಕೆ ತರಲಾಗುವುದು. ಆಗ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು.