ಬೆಂಗಳೂರು: ನಾವು ರಾಜಕೀಯ ಸನ್ಯಾಸಿಗಳಲ್ಲ. ಒಂದು ವೇಳೆ ಮೈತ್ರಿ ಸರ್ಕಾರದ ದೋಸ್ತಿ ಪಕ್ಷಗಳ ಶಾಸಕರು ರಾಜೀನಾಮೆ ನೀಡಿದ್ರೆ, ಆ ಸಂದರ್ಭವನ್ನು ನಾವು ಬಳಸಿಕೊಳ್ಳುತ್ತೇವೆ. ಸರ್ಕಾರ ರಚನೆ ಮಾಡುತ್ತೇವೆ. ಆದ್ರೆ ನಾವಾಗಿಯೇ ಸರ್ಕಾರ ಅಸ್ಥಿರಗೊಳಿಸುವ ಯತ್ನ ನಡೆಸಲ್ಲ ಅಂತ ಮಾಜಿ ಡಿಸಿಎಂ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ನಗರದ ಟೌನ್ಹಾಲ್ನಲ್ಲಿ ಸುದ್ದಿಗಾರರೊಂದಿಗೆ ಮಾತ್ನಾಡಿದ ಅವ್ರು, ಸರ್ಕಾರ ಇರುತ್ತೋ ಇಲ್ವೋ ಯಾರಿಗೂ ಗೊತ್ತಿಲ್ಲ. ಸರ್ಕಾರದಲ್ಲಿರೋರಿಗೇ ಗೊತ್ತಿಲ್ಲ. ಬಿಜೆಪಿಗೂ ಗೊತ್ತಿಲ್ಲ. ಅವ್ರಿಗೇ ಹೊಂದಾಣಿಕೆ ಇಲ್ಲ. ಅವ್ರು ರಾಜೀನಾಮೆ ನೀಡುವುದಾದ್ರೆ ಕಾಂಗ್ರೆಸ್ ಹಾಗೂ ಜನತಾದಳಕ್ಕೆ ನೀಡ್ತಾರೆ. ಅವ್ರ ಪಕ್ಷದ ಗೊಂದಲದ ಪಾಪವನ್ನು ಅವ್ರೇ ಅನುಭವಿಸಲಿದ್ದಾರೆ.
![undefined](https://s3.amazonaws.com/saranyu-test/etv-bharath-assests/images/ad.png)
ಕುಮಾರಸ್ವಾಮಿ ಕಳೆದ 7 ತಿಂಗಳಿನಿಂದ ಮುಖ್ಯಮಂತ್ರಿಗಳಾಗಿಲ್ಲ. ಅವರು ಕ್ಲರ್ಕ್ ಆಗಿದ್ದಾರೆ. ಅಲ್ಲಿನ ಕಾಂಗ್ರೆಸ್-ಜೆಡಿಎಸ್ ಶಾಸಕರೇ ಕೈಗೆ ಸಿಗದೇ ಓಡಾಡುತ್ತಿದ್ದಾರೆ. ಅವ್ರಿಗೆ ಕಾಂಗ್ರೆಸ್ ಮೇಲೆ, ಸಿಎಂ ಮೇಲೆ ಇರುವ ವಿರೋಧದಿಂದ ಕೈಗೆ ಸಿಗುತ್ತಿಲ್ಲ.
ಇದಕ್ಕಾಗಿ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅವ್ರ ಶಾಸಕರನ್ನು ಜೊತೆಯಲ್ಲಿ ಇಟ್ಟುಕೊಳ್ಳದೇ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪ್ರಮುಖರ ಸಂಪರ್ಕಕ್ಕೆ ಸಿಗದಂತೆ ಓಡಾಡುತ್ತಿದ್ದಾರೆ. ಹಾಗಾಗಿ ಮೈತ್ರಿ ಸರ್ಕಾರದ ಸಿಎಂ ಕುಮಾರಸ್ವಾಮಿ ಬಜೆಟ್ ಮಂಡಿಸುವುದೇ ಅನುಮಾನ. ಒಂದು ವೇಳೆ 20 ಶಾಸಕರು ರಾಜೀನಾಮೆ ಕೊಟ್ಟರೂ ಸುಮ್ಮನೆ ಇರಲು ನಾವೇನು ಸನ್ಯಾಸಿಗಳಲ್ಲ. ಆ ಸಂದರ್ಭವನ್ನ ಬಳಸಿಕೊಳ್ಳುತ್ತೇವೆ. ಆದ್ರೆ ನಾವಾಗಿಯೇ ಮೈತ್ರಿ ಸರ್ಕಾರ ಬೀಳಿಸುವ ಯತ್ನ ಮಾಡಲ್ಲ ಎಂದ್ರು.
ಅಂಬಿ ಪತ್ನಿ ಸುಮಲತಾ ಜತೆ ಮಾತುಕತೆ:
ಮಂಡ್ಯದಲ್ಲಿ ಒಳ್ಳೆಯ ಅಭ್ಯರ್ಥಿಗೆ ಟಿಕೆಟ್ ನೀಡ್ಬೇಕು ಅನ್ನೋದು ನಮ್ಮ ಉದ್ದೇಶ. ರಾಜಕೀಯ ನಿಂತ ನೀರಲ್ಲ. ಸುಮಲತಾ ಅಂಬರೀಶ್ ಯಾವ ಪಕ್ಷಕ್ಕೂ ಸೇರಿದವರಲ್ಲ. ಹಾಗಾಗಿ ಅವ್ರೊಂದಿಗೂ ಮಾತನಾಡುತ್ತೇವೆ. ಯಾರಿಗೆ ಟಿಕೆಟ್ ಅನ್ನೋ ವಿಚಾರವನ್ನ ಪಾರ್ಟಿ ತೀರ್ಮಾನಿಸುತ್ತೆ. ಈಗ ರಾಜ್ಯದಲ್ಲಿ ಗೊಂದಲ ಇದೆ. ಹೊಂದಾಣಿಕೆ ಮುರಿದು ಬೀಳುವ ಕುರಿತು ರೇವಣ್ಣ, ದೇವೇಗೌಡ್ರು , ಸಿದ್ದರಾಮಯ್ಯ ಕೂಡ ಹೇಳಿದ್ದಾರೆ. ಹಾಗೇನಾದ್ರೂ ಒಮ್ಮತ ಬಾರದಿದ್ರೆ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ ಎಂದು ಎಲ್ಲರೂ ಹೇಳಿದ್ದಾರೆ. ನೋಡೋಣ ಅಲ್ಲಿಯವರೆಗೂ ಸರ್ಕಾರ ಇರಲಿದೆಯೋ ಇಲ್ಲವೋ ಗೊತ್ತಿಲ್ಲ ಅಂತ ಆರ್.ಅಶೋಕ್ ಹೇಳಿದ್ರು.