ಬೆಂಗಳೂರು: ಮಾಜಿ ಸಚಿವ ವಿ.ಸೋಮಣ್ಣರಿಗೆ ರಾಜ್ಯಸಭಾ ಟಿಕೆಟ್ ನೀಡುವುದಕ್ಕೆ ನಮ್ಮದೇನೂ ತಕರಾರಿಲ್ಲ. ಪಕ್ಷದ ಹೈಕಮಾಂಡ್ ಟಿಕೆಟ್ ನೀಡಿದರೆ ನಾನು ಸ್ವಾಗತಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ಜಯನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ಏರ್ಪೋರ್ಟ್ಗೆ ಬಂದಿಳಿದ ತಕ್ಷಣವೇ ನನಗೆ ಫೋನ್ ಮಾಡಿದ್ದರು. ಎಲ್ಲಾ ಒಳ್ಳೆಯದಾಗಿದೆ, ಏನೂ ಸಮಸ್ಯೆ ಇಲ್ಲ. ಪಾರ್ಟಿಯಲ್ಲಿ ನಾವೆಲ್ಲರೂ ಕೆಲಸ ಮಾಡೋಣ. ಲೋಕಸಭೆಯಲ್ಲಿ ಮತ್ತೆ ಮೋದಿ ಅವರನ್ನು ನಾವು ಗೆಲ್ಲಿಸಬೇಕು. ಮತ್ತೆ ನಾವು ಭೇಟಿ ಆಗೋಣ ಎಂದಿರುವುದಾಗಿ ಹೇಳಿದರು.
ಅಮಿತ್ ಶಾ ಜೊತೆಗೆ ಸೋಮಣ್ಣ ಏನು ಮಾತಾಡಿದ್ದಾರೆ ಅಂತ ಗೊತ್ತಿಲ್ಲ. ಈ ವಿಚಾರವನ್ನು ನಾನು ಮಾಧ್ಯಮದಲ್ಲಿ ನೋಡಿದೆ. ನನ್ನ ಜೊತೆಗೂ ಮಾತಾಡುವಾಗ ರಾಜ್ಯಸಭಾ ಟಿಕೆಟ್ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈಗಾಗಲೇ ಕೇಂದ್ರ ನಾಯಕರೇ ಒಪ್ಪಿಕೊಂಡಿರುವ ಕಾರಣ ನಮ್ಮದೇನೂ ಕಮೆಂಟ್ ಇಲ್ಲ ಎಂದರು.
ರಾಹುಲ್ ಗಾಂಧಿ ಯಾತ್ರೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಕಳೆದ ಬಾರಿ ಅವರು ದಕ್ಷಿಣದಿಂದ ಶುರು ಮಾಡಿದ್ದರು. ದಕ್ಷಿಣದಿಂದ ಯಾತ್ರೆ ಶುರು ಮಾಡಿದ ಮೇಲೆ ಉತ್ತರ ಭಾರತದಲ್ಲಿ 3 ರಾಜ್ಯಗಳಲ್ಲಿ ಸೋಲಾಗಿದೆ. ಅಲ್ಲಿಂದ ಶುರು ಮಾಡಿ 3 ರಾಜ್ಯಗಳ ಚುನಾವಣೆಯಲ್ಲಿ ಸೋತಿದ್ದಾರೆ. ಎಲ್ಲೆಲ್ಲಿ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಮಾಡುತ್ತೋ ಅಲ್ಲಿ ಕಾಂಗ್ರೆಸ್ ಅವನತಿ ಪ್ರಾರಂಭವಾಗುತ್ತಿದೆ. ದೇಶಕ್ಕೆ ಸರ್ವಾಧಿಕಾರ ತಂದವರು, ಎಮರ್ಜೆನ್ಸಿ ತಂದವರು, ನ್ಯಾಯಾಂಗ, ಪತ್ರಿಕಾ ರಂಗವನ್ನು ದಮನ ಮಾಡಿದವರು ನ್ಯಾಯ ಯಾತ್ರೆ ಮಾಡುತ್ತಿದ್ದಾರೆ. ನ್ಯಾಯ ಕೇಳೋಕೆ ಅವರಿಗೆ ಯಾವ ಅಧಿಕಾರ ಇದೆ ಎಂದು ಪ್ರಶ್ನಿಸಿದರು.
ಅನಂತ್ ಕುಮಾರ್ ಹೆಗಡೆ ಅವರ ವಿವಾದಾತ್ಮಕ ಹೇಳಿಕೆ ಕುರಿತು ಮಾತನಾಡಿ, ವೈಯಕ್ತಿಕ ನಿಂದನೆ ಸರಿಯಲ್ಲ. ಇದನ್ನಷ್ಟೇ ಹೇಳಬಲ್ಲೆ. ರಾಮಮಂದಿರ ವಿಚಾರದಲ್ಲಿ ಸಿದ್ಧರಾಮಯ್ಯರ ನಡವಳಿಕೆಯನ್ನು ಖಂಡಿಸುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ರಾಮಮಂದಿರ ಕಟ್ಟುವುದರ ಬಗ್ಗೆ ಸಿದ್ಧರಾಮಯ್ಯನವರು ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ. ಅಲ್ಲಿಗೇಕೆ ಹೋಗಬೇಕು? ನಮ್ಮಲ್ಲಿ ರಾಮಮಂದಿರ ಇಲ್ವಾ?. ಮತ್ತೊಂದು ಕಡೆ ರಾಮನೇ ಇಲ್ಲ ಅಂತಿದ್ದಾರೆ. ಆದರೆ ಅಲ್ಲ್ಯಾಕೆ ನಾವು ಹೋಗ್ತಿದ್ದೇವೆ ಅಂದರೆ ಅದು ರಾಮ ಹುಟ್ಟಿದ ಸ್ಥಳ. ಹಾಗಾಗಿ ಅಲ್ಲಿಗೆ ಹೋಗುತ್ತೇವೆ. ತಿರುಪತಿಗೆ, ಧರ್ಮಸ್ಥಳ, ಯಲ್ಲಮ್ಮನ ದೇವಸ್ಥಾನಕ್ಕೆ ಯಾಕೆ ಹೋಗುತ್ತೇವೆ?. ಇಲ್ಲೇ ನಮ್ಮಲ್ಲಿಯೇ ಇಲ್ವಾ ಎಂದು ತಿರುಗೇಟು ನೀಡಿದರು.
ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅಶೋಕ್, ಹಾನಗಲ್ ಅತ್ಯಾಚಾರ ಪ್ರಕರಣ ದಿನಕ್ಕೊಂದು ತಿರುವು ಕಾಣುತ್ತಿದೆ. ನಮ್ಮ ರಾಜ್ಯದ ಮಹಿಳಾ ಬಿಜೆಪಿ ನಿಯೋಗ ಸಂತ್ರಸ್ತೆಯನ್ನು ಭೇಟಿ ಮಾಡಲು ಹಾನಗಲ್ಗೆ ಹೋಗ್ತಿದ್ದಾರೆ. ಆದರೆ ಭೇಟಿಗೆ ಅವಕಾಶ ಕೊಡ್ತಿಲ್ಲ. ಇದೆಲ್ಲಾ ನೋಡಿದರೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ ಅನ್ನಿಸುತ್ತಿದೆ ಎಂದರು.
ಇದನ್ನೂ ಓದಿ: 'ಕೆಪಿಎಸ್ಸಿ ಮುಂದೆ ಪ್ರತಿಭಟನಾನಿರತ ವಿದ್ಯಾರ್ಥಿ ಮುಖಂಡನ ಬಂಧನ ನಿರ್ದಯಿ ಕ್ರಮ'