ಬೆಂಗಳೂರು: ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಪ್ರಕಟಿಸಿರುವ ಹೈಕೋರ್ಟ್, ಹಿಜಾಬ್ ನೆಪದಲ್ಲಿ ಸಮಾಜದ ಶಾಂತಿ ಹಾಗೂ ಸಾಮರಸ್ಯವನ್ನು ಕೆಡಿಸಲು ಪ್ರಯತ್ನಿಸಿದ ಕಾಣದ ಕೈಗಳನ್ನು ತ್ವರಿತವಾಗಿ ಪತ್ತೆಹಚ್ಚಿ ಕ್ರಮ ಜರುಗಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ಹೈಕೋರ್ಟ್ ಪೂರ್ಣ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪೀಠ ತನ್ನ ತೀರ್ಪಿನಲ್ಲಿ, ಉಡುಪಿ ಕಾಲೇಜಿನ ಪರ ವಕೀಲರ ವಾದಮಂಡನೆ ಹಾಗೂ ಸಲ್ಲಿಸಿರುವ ದಾಖಲೆಗಳ ಪ್ರಕಾರ 2004ರಿಂದಲೂ ಸಮವಸ್ತ್ರ ಸಂಹಿತೆ ಜಾರಿಯಲ್ಲಿದ್ದು ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಬಂದಿದೆ. ಆದರೆ ಇದ್ದಕ್ಕಿದ್ದಂತೆ ಶೈಕ್ಷಣಿಕ ಅವಧಿಯ ನಡುವೆ ಹಿಜಾಬ್ ಸಮಸ್ಯೆ ಸೃಷ್ಟಿಯಾಗಿದೆ. ಕಾಣದ ಕೈಗಳು ಸಮಾಜದ ಶಾಂತಿ ಹಾಗೂ ಸಾಮರಸ್ಯವನ್ನು ಕೆಡಿಸುವ ಪ್ರಯತ್ನ ನಡೆಸಿರುವುದನ್ನು ತೋರಿಸುತ್ತದೆ.
ವಿಚಾರಣೆ ಸಂದರ್ಭದಲ್ಲಿ ಕಾಲೇಜು ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್.ಎಸ್ ನಾಗಾನಂದ್, ಹಿಜಾಬ್ ವಿವಾದ ಉಲ್ಬಣಗೊಳ್ಳಲು ಕಾರಣವಾದ ಸಂಘಟನೆ ವಿರುದ್ಧ ಕಾಲೇಜಿನ ಉಪನ್ಯಾಸಕರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ. ಈ ಸಂಬಂಧ ಸಂಘಟನೆ ಕುರಿತಂತೆ ಮಾಹಿತಿ ಕೇಳಿದಾಗ ಸರ್ಕಾರ ಕೆಲವೊಂದು ದಾಖಲೆಗಳನ್ನು ಪೀಠಕ್ಕೆ ಸಲ್ಲಿಸಿದೆ.
ಗಲಭೆಗೆ ಕಾರಣವಾದ ಸಂಘಟನೆ ವಿರುದ್ಧ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ತನಿಖೆಯ ಮೇಲೆ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಈ ಕುರಿತಂತೆ ನಾವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ವರದಿಯನ್ನು ನಾವು ಪರಿಶೀಲಿಸಿದ್ದೇವೆ. ತನಿಖೆಯು ವೇಗವಾಗಿ ಮತ್ತು ದಕ್ಷವಾಗಿ ನಡೆಯಬೇಕು ಹಾಗೂ ವಿಳಂಬ ಮಾಡದೇ ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ಗುರಿಪಡಿಸುವುದನ್ನು ನಿರೀಕ್ಷಿಸುತ್ತೇವೆ ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ನ್ಯಾಯಾಧೀಕರಣದ ತೀರ್ಪಿನಂತೆ ಕೇಂದ್ರದ ಗೆಜೆಟ್ ಅಧಿಸೂಚನೆಯಾದ ನಂತರ ಹನಿ ನೀರಾವರಿಗೆ ಕ್ರಮ : ಸಚಿವ ಕಾರಜೋಳ