ಬೆಂಗಳೂರು: ರಾಜಧಾನಿಯಲ್ಲಿ ಕೋವಿಡ್ ರೌದ್ರನರ್ತನ ತೋರಿರುವುದರಿಂದ ಬೆಡ್ ಇಲ್ಲದೆ ಪರದಾಡುತ್ತಿರುವ ಮಧ್ಯೆಯೇ, ಇದೀಗ ಚಿತಾಗಾರದಲ್ಲೂ ಜಾಗವಿಲ್ಲದೆ ಮೃತರ ಕುಟುಂಬಸ್ಥರು ಕಾಯುವ ಪರಿಸ್ಥಿತಿ ಎದುರಾಗಿದೆ.
ಇಂದು ಬೆಳಗ್ಗೆ ನಗರದ ಪೀಣ್ಯ ಚಿತಾಗಾರದಲ್ಲಿ 13 ಆ್ಯಂಬುಲೆನ್ಸ್ಗಳು ಸಾಲು ಸಾಲುಗಟ್ಟಿ ನಿಂತಿದ್ದು ಕಂಡು ಬಂತು. ನಿನ್ನೆ ರಾತ್ರಿ 2 ಗಂಟೆಯತನಕ ಚಿತಾಗಾರದ ಸಿಬ್ಬಂದಿ ಅಂತ್ಯಸಂಸ್ಕಾರ ನಡೆಸಿದ್ದು, ಬೆಳಗ್ಗಿನ ಪಾಳಿಯಲ್ಲಿ ಮತ್ತೆ ಶವಸಂಸ್ಕಾರ ಪ್ರಾರಂಭವಾಗಿದೆ.
ಇದನ್ನೂ ಓದಿ: ಇಂದಿನಿಂದ ಕೋವಿಡ್ ಟಫ್ ರೂಲ್ಸ್ ಜಾರಿ: ಬೆಂಗಳೂರು ಪೊಲೀಸರಿಗೆ ಟಾರ್ಗೆಟ್ ಫಿಕ್ಸ್
ಆ್ಯಂಬುಲೆನ್ಸ್‌ಗಳಲ್ಲಿ ಎರಡೆರಡು ಶವ
ಚಿತಾಗಾರಗಳಲ್ಲಿ ಬಿಡುವಿಲ್ಲದೆ ಹೆಣ ಸುಡುವ ಕಾರ್ಯ ಮಾಡಲಾಗುತ್ತಿದೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವಗಳೇ ಬರುತ್ತಿವೆ. ಒಂದೊಂದು ಆ್ಯಂಬುಲೆನ್ಸ್‌ಗಳಲ್ಲಿ ಎರಡೆರಡು ಮೃತದೇಹಗಳನ್ನು ತರಲಾಗ್ತಿದೆ. ಹೀಗಾಗಿ, ಚಿತಾಗಾರದಲ್ಲೂ ಮೃತರ ಕುಟುಂಬಸ್ಥರು ಹೆಣದ ಮುಂದೆ ಗಂಟೆಗಟ್ಟಲೆ ಕಾಯುವ ಅನಿವಾರ್ಯತೆ ಎದುರಾಗಿದೆ.