ಬೆಂಗಳೂರು : ಸೋದರ ಸಂಬಂಧಿಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ನಡೆದಿದೆ. ಸೋನು ಪಾಶಾ (35) ಎಂಬವರೇ ಹತ್ಯೆಗೀಡಾದ ದುರ್ದೈವಿ. ಮಂಗಳವಾರ ಮಧ್ಯಾಹ್ನ ಗೋಪಾಲಪುರದ ಅಂಜು ಮೆಟಲ್ ಸ್ಕ್ರ್ಯಾಪ್ ಗೋಡೌನ್ ಬಳಿ ಫಾರೂಕ್ ಎಂಬಾತ ಸೋನು ಪಾಶಾ (35) ಎಂಬಾತನ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಸೋನು ಪಾಶಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಹಲ್ಲೆ ಮಾಡಿದ ಫಾರೂಕ್ನನ್ನು ಮಾಗಡಿ ರಸ್ತೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸೋದರ ಸಂಬಂಧಿಗಳ ಜಗಳ ಕೊಲೆಯಲ್ಲಿ ಅಂತ್ಯ: ಆರೋಪಿ ಫಾರೂಕ್, ಕೊಲೆಯಾದ ಸೋನು ಪಾಶಾ ಇಬ್ಬರೂ ಸಹ ಚಿಕ್ಕಪ್ಪ - ದೊಡ್ಡಪ್ಪನ ಮಕ್ಕಳು. ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಅಕ್ರಂನಿಗೆ ಕರೆ ಮಾಡಿದ್ದ ಫಾರೂಕ್, ಆತನ ಪತ್ನಿಗೆ ಅವಾಚ್ಯವಾಗಿ ನಿಂದಿಸಿದ್ದ. ಅದೇ ದಿನ ರಾತ್ರಿ 9ಗಂಟೆಗೆ ಫಾರೂಕ್ನ ಮನೆ ಬಳಿಗೆ ತೆರಳಿದ್ದ ಅಕ್ರಂನ ಪತ್ನಿ ಆತನಿಗೆ ಕಪಾಳಮೋಕ್ಷ ಮಾಡಿದ್ದರು. ಬಳಿಕ ಇದೇ ವಿಚಾರವನ್ನು ಅಕ್ರಂ ತನ್ನ ಸೋದರ ಮಾವ ರಿಯಾಜ್ ಬಳಿ ಹೇಳಿಕೊಂಡಿದ್ದ. ಇಬ್ಬರೂ ಸೋದರ ಸಂಬಂಧಿಗಳೇ ಆಗಿದ್ದರಿಂದ ಗಲಾಟೆಯನ್ನು ಸಂಧಾನ ಮಾಡಲು ನಿನ್ನೆ (ಮಂಗಳವಾರ) ಮಧ್ಯಾಹ್ನ ಎರಡೂ ಕಡೆಯವರನ್ನು ಗೋಪಾಲಪುರದಲ್ಲಿರುವ ತನ್ನ ಗೋಡೌನ್ ಬಳಿ ರಿಯಾಜ್ ಕರೆಯಿಸಿಕೊಂಡಿದ್ದ.
ರಿಯಾಜ್ ಮಧ್ಯಸ್ಥಿಕೆಯಲ್ಲಿ ಫಾರೂಕ್ ಹಾಗೂ ಅಕ್ರಂ ನಡುವೆ ರಾಜಿ ಸಂಧಾನ ನಡೆಯುತ್ತಿರುವಾಗಲೇ ಅಕ್ರಂನ ಸಹೋದರ ಸೋನು, ಫಾರೂಕ್ನನ್ನು ನಿಂದಿಸಿದ್ದ. ಈ ವೇಳೆ ಕೋಪಗೊಂಡ ಫಾರೂಕ್ ಅಲ್ಲಿಯೇ ಇದ್ದ ಕಬ್ಬಿಣದ ರಾಡ್ನಿಂದ ಸೋನುನ ತಲೆಗೆ ಹೊಡೆದಿದ್ದ. ಪರಿಣಾಮ ಒಂದೇ ಏಟಿಗೆ ನೆಲಕ್ಕೆ ಬಿದ್ದಿದ್ದ ಸೋನುವನ್ನು ಸಂಬಂಧಿಕರು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೋನು ಸಾವನ್ನಪ್ಪಿದ್ದಾನೆ.
ಸದ್ಯ ಸೋನು ಸಹೋದರ ವಾಸೀಂ ಪಾಶಾ ಎಂಬಾತ ನೀಡಿರುವ ದೂರಿನನ್ವಯ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ಫಾರೂಕ್ನನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಸೊಸೆಯ ಹತ್ಯೆ : ಗಂಡ ಮತ್ತು ಮಾವ ಸೇರಿಕೊಂಡು ಸೊಸೆಯನ್ನು ಕೊಡಲಿಯಿಂದ ಹೊಡೆದು ಹತ್ಯೆಗೈದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಿಸನಾಳ ಗ್ರಾಮದಲ್ಲಿ ನಡೆದಿದೆ. ರೇಖಾ ಬೀಳಗಿ(21) ಕೊಲೆಯಾದ ದುರ್ದೈವಿ.
ಮೃತ ರೇಖಾ ಬೀಳಗಿ ಕಳೆದ ಎರಡು ವರ್ಷಗಳ ಹಿಂದೆ ಪರಶುರಾಮ ಬೀಳಗಿ ಎಂಬಾತನನ್ನು ಮದುವೆಯಾಗಿದ್ದಳು. ದಂಪತಿ ನಡುವೆ ಆಗಾಗ್ಗೇ ಜಗಳ ನಡೆಯುತ್ತಿದ್ದವು. ಅಲ್ಲದೇ ಪರಿಶುರಾಮ ಬೀಳಗಿ ತನ್ನ ಪತ್ನಿ ರೇಖಾ ಮೇಲೆ ಸಂಶಯ ವ್ಯಕ್ತಪಡಿಸಿ ಜಗಳ ಆಡುತ್ತಿದ್ದನಂತೆ. ಈ ವೇಳೆ ರೇಖಾಳಿಗೆ ಕೊಡಲಿಯಲ್ಲಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕ ಬೀಳಗಿ ಪೊಲೀಸ್ ಠಾಣೆಗೆ ಇಬ್ಬರೂ ಹಾಜರಾಗಿದ್ದಾರೆ. ಘಟನಾ ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಚನ್ನರಾಯಪಟ್ಟಣದಲ್ಲಿ ಹಾಡಹಗಲೇ ರೌಡಿಶೀಟರ್ ಕೊಲೆ: ರಾಜ್ಯದ ವಿವಿಧೆಡೆ ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರ ಸಾವು