ಬೆಂಗಳೂರು: ಕೊರೊನಾ ಹಾಟ್ಸ್ಪಾಟ್ ಎಂದು ಬಿಂಬಿತರಾಗಿರುವ ಪಾದರಾಯನಪುರದಲ್ಲಿ, ಮತ್ತೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ನಡೆದಿದೆ. ಆದರೆ ಈ ಬಾರಿ ರಸ್ತೆಗೆ ಮಹಿಳಾ ಮಣಿಯರೇ ಇಳಿದಿದ್ದಾರೆ.
ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಹೆಚ್ಚಾಗಿದ್ದರಿಂದ ಬಿಬಿಎಂಪಿ, ಇಡೀ ಪಾದರಾಯನಪುರ ವಾರ್ಡ್ನ್ನು ಸೀಲ್ಡೌನ್ ಮಾಡಿತ್ತು. ಕಾಲಕ್ರಮೇಣ ಕೊರೊನಾ ಕೇಸ್ ಇಲ್ಲದ ರಸ್ತೆಗಳಲ್ಲಿ ಬ್ಯಾರಿಕೇಡ್ ತೆಗೆದು ಸಂಚಾರಕ್ಕೆ ಅನುವು ಮಾಡುತ್ತಿದ್ದಂತೆ, ಪೊಲೀಸರ ಜೊತೆ ಮಹಿಳೆಯರು ಕ್ಯಾತೆ ತೆಗೆದಿದ್ದಾರೆ.
ಪಾದರಾಯನಪುರದ ಕೆಲವು ಕಡೆ ಕೊರೊನಾ ಸೋಂಕಿತರು ಹೊಸದಾಗಿ ಕಾಣಿಸಿಕೊಳ್ಳದ ಹಿನ್ನೆಲೆ, ಆರೋಗ್ಯ ಇಲಾಖೆ ಸೀಲ್ ಡೌನ್ ಸಡಿಲಿಸಲು ಸೂಚಿಸಿತ್ತು. ಇದರ ಬೆನ್ನಲ್ಲೇ ಪೊಲೀಸರು ಪಾದರಾಯನಪುರ 11 ನೇ ಅಡ್ಡರಸ್ತೆಗಳನ್ನು, ಸಾರ್ವಜನಿಕ ಸಂಚಾರಕ್ಕೆ ಮುಕ್ತ ಮಾಡುತ್ತಿದ್ದಂತೆ ಮಹಿಳೆಯರು ವಾಗ್ವಾದಕ್ಕೆ ಇಳಿದಿದ್ದಾರೆ.
ಕಂಟೇನ್ಮೆಂಟ್ನಲ್ಲಿ ಇರುವ ರಸ್ತೆ ಫ್ರೀ ಮಾಡುವುದಾದರೆ, ನಮ್ಮ ರಸ್ತೆಯನ್ನು ಸಹ ಸಂಚಾರಕ್ಕೆ ಮುಕ್ತಗೊಳಿಸಿ. ಇಲ್ಲದಿದ್ದರೆ ಯಾವುದೇ ರಸ್ತೆಯಲ್ಲಿ ಬ್ಯಾರಿಕೇಡ್ ತೆರೆಯಬೇಡಿ ಎಂದು ಗಲಾಟೆ ನಡೆಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸರು ಯಥಾಸ್ಥಿತಿಯನ್ನು ಮುಂದುವರೆಸಿದ್ದಾರೆ.