ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿ ಹೆಗ್ಗನಹಳ್ಳಿಯ ರಾಜೇಂದ್ರ ವಿದ್ಯಾ ಸಂಸ್ಥೆ ಬಳಿ ಪುಡಿರೌಡಿ ಮನೋಜ್@ ಮಂಜನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದೆ. ಮನೋಜ್ ಕೈಯಲ್ಲಿ ಮಚ್ಚು ಹಿಡಿದು ಬರುತ್ತಿದ್ದ ವೇಳೆ ಆಟೋದಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಮೊದಲು ಆಟೋದಿಂದ ಡಿಕ್ಕಿ ಹೊಡೆಸಿದ್ದಾರೆ. ಕೆಳಗೆ ಬಿದ್ದ ಮಂಜನ ಮೇಲೆ ಮುಗಿಬಿದ್ದ ಕಿಡಿಗೇಡಿಗಳು ಬೃಹದಾಕಾರದ ಹೂವಿನ ಕುಂಡವನ್ನು ತಲೆ ಮೇಲೆ ಎತ್ತಾಕಿ ಕೊಲೆ ಮಾಡಿ, ನಂತರ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಹೆಗ್ಗನಹಳ್ಳಿ ಮುಖ್ಯರಸ್ತೆ ಮೋಹನ್ ಥಿಯೇಟರ್ ಸಮೀಪದ ರಾಜೇಂದ್ರ ವಿದ್ಯಾ ಸಂಸ್ಥೆಯ ಗೇಟ್ ಬಳಿಯೇ ಘಟನೆ ನಡೆದಿದೆ. ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಕೃತ್ಯದ ಸಂಪೂರ್ಣ ದೃಶ್ಯ ಅಕ್ಕಪಕ್ಕದ ಸಿಸಿಟಿವಿಗಳಲ್ಲಿ ಸೆರೆಯಾಗಿದೆ. ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಮತ್ತು ಕಾಮಾಕ್ಷಿಪಾಳ್ಯ ಪೊಲೀಸರು ಘಟನೆ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.