ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜನ್ಮದಿನವನ್ನು (ಮಾರ್ಚ್ 17) ಸ್ಪೂರ್ತಿ ದಿನ ಎಂದು ಸರ್ಕಾರದ ವತಿಯಿಂದಲೇ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
![puneeth-rajkumar-birthday-celebrated-as-inspiration-day](https://etvbharatimages.akamaized.net/etvbharat/prod-images/kn-bng-10-cm-punith-day-announced-script-7208080_15092022214534_1509f_1663258534_754.jpg)
ಚೌಡಯ್ಯ ಸ್ಮಾರಕ ಸಭಾಭವನದಲ್ಲಿ ನಡೆದ ಬ್ರಹ್ಮರ್ಷಿ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ, ಸಂಸ್ಕ್ರತಿ ಹಾಗೂ ಇಂಧನ ಸಚಿವ ವಿ. ಸುನೀಲ್ ಕುಮಾರ್, ಪುನೀತ್ ದಿನಾಚರಣೆಯನ್ನು ಸ್ಫೂರ್ತಿ ದಿನವಾಗಿ ಆಚರಣೆ ಮಾಡಬೇಕೆಂಬುದು ಸೇರಿದಂತೆ ಮಾಡಿದ ಮನವಿಗಳಿಗೆ ಸ್ಪಂದಿಸಿದ ಅವರು ಈ ಭರವಸೆ ನೀಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರು ಅಕಾಲಿಕವಾಗಿ ನಮ್ಮನ್ನು ಅಗಲಿದ್ದಾರೆ. ವೈಯಕ್ತಿಕವಾಗಿ ನನಗೆ ಅತ್ಯಂತ ಪ್ರೀತಿಪಾತ್ರ ವ್ಯಕ್ತಿಯಾಗಿದ್ದರು. ನಾಡಿನ ಕೋಟ್ಯಂತರ ಯುವಕರಿಗೆ ಅವರು ಸ್ಪೂರ್ತಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಪುನೀತ್ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರದ ವತಿಯಿಂದಲೇ ಆಚರಣೆ ಮಾಡಲಾಗುವುದು ಎಂದು ಹೇಳಿದರು.
ಪ್ರತ್ಯೇಕ ನಿಧಿ : ಈಡಿಗ- ಬಿಲ್ಲವ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಇನ್ನಿತರ ಅಭಿವೃದ್ಧಿಗೆ ಪ್ರತ್ಯೇಕ ನಿಧಿಯನ್ನು ಪ್ರಾರಂಭಿಸಲಾಗುವುದು. ಈ ವರ್ಷದ ಬಜೆಟ್ ನಲ್ಲೇ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಬ್ರಹ್ಮರ್ಷಿ ನಾರಾಯಣಗುರು ಶ್ರೇಷ್ಠ ಆಧ್ಯಾತ್ಮಿಕ ಸಂತರು. ಅವರನ್ನು ಒಂದು ಜಾತಿ ಹಾಗೂ ಧರ್ಮಕ್ಕೆ ಸೀಮಿತ ಮಾಡುವುದಕ್ಕೆ ಸಾಧ್ಯವಿಲ್ಲ. ಇಡಿ ಜಗತ್ತಿಗೆ ಅವರ ತತ್ತ್ವ ಮಾರ್ಗದರ್ಶಿಯಾಗಿದೆ. ಬೆಂಗಳೂರಿನಲ್ಲಿ ನಾರಾಯಣಗುರು ಹೆಸರಿನಲ್ಲಿ ಸಮುದಾಯ ಭವನ ಸ್ಥಾಪನೆ ಮಾಡುವುದಕ್ಕಾಗಿ ಸರ್ಕಾರದ ವತಿಯಿಂದ 5 ಕೋಟಿ ರೂಪಾಯಿಯನ್ನು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
ನೆಲಮಂಗಲ ಸಮೀಪ ಇರುವ ಸೋಲೂರು ಆರ್ಯ-ಈಡಿಗ ಮಠ ಪ್ರಾರಂಭಿಸಿರುವ ಶೈಕ್ಷಣಿಕ ಚಟುವಟಿಕೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಜಾಗ ನೀಡಲಾಗುವುದು. ಇದರ ಜತೆಗೆ ಕಾರ್ಯಕ್ರಮದಲ್ಲಿ ಕನ್ನಡ- ಸಂಸ್ಕ್ರತಿ ಹಾಗೂ ಇಂಧನ ಸಚಿವ ವಿ ಸುನಿಲ್ ಕುಮಾರ್ ಭಾಗವಹಿಸಿದ್ದರು.
ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ಭಯೋತ್ಪಾದಕರಾಗುತ್ತಿದ್ದಾರೆ, ಮತಾಂತರ ಕಾನೂನುಬದ್ಧ ಮಾಡುತ್ತಿದ್ದೇವೆ: ಸಿಎಂ