ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ನಾಳೆ(ಭಾನುವಾರ) ನಡೆಯಲಿದೆ. ಇಂದು ಸಂಜೆ ವೇಳೆಗೆ ಸಮಯ ನಿಗದಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಪುನೀತ್ ಅವರ ಮಗಳು ಧೃತಿ ಅಮೆರಿಕದಿಂದ ದೆಹಲಿ ತಲುಪಿದ್ದು, ಅಲ್ಲಿಂದ ಬೆಂಗಳೂರು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದರು.
ಅವರು 5:30, 6 ಗಂಟೆಗೆ ಬರುವ ಸಾಧ್ಯತೆ ಇದೆ. ಇಲ್ಲಿಯೂ ಜನಸಂದಣಿ ಹೆಚ್ಚಾಗಿದೆ. ಬಹಳಷ್ಟು ಜನ ಅಪ್ಪು ಅವರ ಅಂತಿಮ ದರ್ಶನ ಪಡೆಯುವ ಇಚ್ಛೆ ಹೊಂದಿದ್ದಾರೆ. 6 ಗಂಟೆಯ ನಂತರ ಕತ್ತಲಾದ ಮೇಲೆ ಸಣ್ಣಜಾಗದಲ್ಲಿ ಅಂತ್ಯಕ್ರಿಯೆ ಮಾಡುವುದು ಸವಾಲಿನ ಕೆಲಸ. ಕುಟುಂಬ ಸದಸ್ಯರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ ಎಂದು ಸಿಎಂ ತಿಳಿಸಿದರು.
ನಾಳೆ ಬೆಳಗಿನ ಜಾವದವರೆಗೂ ದರ್ಶನ ಮಾಡಲು ಅನುಕೂಲ ಮಾಡಲಾಗುವುದು. ಎಲ್ಲರೂ ನಿಧಾನವಾಗಿ, ಶಾಂತವಾಗಿ ಸಾಲಿನಲ್ಲಿ ಬಂದು ದರ್ಶನ ಪಡೆಯಬಹುದು ಎಂದು ಮನವಿ ಮಾಡಿದರು.