ಬೆಂಗಳೂರು: ಹಿಜಾಬ್ ವಿವಾದದ ನಡುವೆಯೂ ರಾಜ್ಯಾದ್ಯಂತ ಇಂದಿನಿಂದ ಪಿಯು, ಪದವಿ ಕಾಲೇಜುಗಳ ಭೌತಿಕ ತರಗತಿ ಆರಂಭಗೊಳ್ಳಲಿವೆ. ಮುಂಜಾಗ್ರತೆ ಕ್ರಮವಾಗಿ ನಗರದಲ್ಲಿರುವ ಎಲ್ಲಾ ಕಾಲೇಜುಗಳ ಮುಂದೆ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ.
ವಿಚಾರಣೆ ಮುಗಿಯುವವರೆಗೂ ಧಾರ್ಮಿಕ ಸಂಕೇತ ಬಳಸದೆ ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ತ್ರಿಸದಸ್ಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ. ಆದೇಶ ಉಲ್ಲಂಘನೆಯಾಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರದ ಆಯಾ ವಲಯಗಳಲ್ಲಿರುವ ಕಾಲೇಜುಗಳ ಮುಂದೆ ಶಾಂತಿ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಡಿಪಿಪಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕಮಿಷನರ್ ನಿರ್ದೇಶನ ಹಿನ್ನೆಲೆಯಲ್ಲಿ ತಮ್ಮ ವ್ಯಾಪ್ತಿಯಲ್ಲಿರುವ ಕಾಲೇಜು ಆಡಳಿತ ಮಂಡಳಿಯವರ ಜತೆ ಸ್ಥಳೀಯ ಪೊಲೀಸರು ಸಭೆ ನಡೆಸಿದ್ದಾರೆ. ಧಾರ್ಮಿಕ ಸಂಕೇತವಿರುವ ಉಡುಪು ಧರಿಸಿ ವಿದ್ಯಾರ್ಥಿಗಳು ಬಂದರೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಲೇಜು ಆವರಣದಲ್ಲಿ ಪ್ರತಿಭಟನೆ, ಗುಂಪುಗೂಡುವುದು ಸೇರಿದಂತೆ ಸಾಮೂಹಿಕವಾಗಿ ವಿದ್ಯಾರ್ಥಿಗಳು ಅನಗತ್ಯವಾಗಿ ಒಂದೆಡೆ ಸೇರುವುದು ಸೇರಿದಂತೆ ಇನ್ನಿತರ ಚಟುವಟಿಕೆಗೆ ನಿರ್ಬಂಧ ವಿಧಿಸಬೇಕು.
ಶೈಕ್ಷಣಿಕ ಸಂಸ್ಥೆಗಳ ಮುಂದೆ 144 ಸೆಕ್ಷನ್ ಜಾರಿಯಲ್ಲಿದ್ದು, ಕಾಲೇಜು ಸುತ್ತಲಿನ 200 ಮೀಟರ್ ವ್ಯಾಪ್ತಿಯವರೆಗೂ ನಾಲ್ಕು ಜನಕ್ಕಿಂತ ಹೆಚ್ಚಿರದಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಗಿದೆ.
ತರಗತಿ ಅವಧಿಯಲ್ಲಿ ಕಾಲೇಜುಗಳ ಮುಂದೆ ಅಗತ್ಯಗನುಣವಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬರುವ ಕಾಲೇಜುಗಳ ಮುಂದೆ ಪೊಲೀಸರು ಬ್ಯಾರಿಕೇಡ್ ಹಾಕಲಾಗಿದೆ. ವದಂತಿಗಳಿಗೆ ಕಿವಿಗೊಡದಂತೆ ವಿದ್ಯಾರ್ಥಿಗಳಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಇಂದು ಕಾಲೇಜು ಆರಂಭ: ಉಡುಪಿಯಲ್ಲಿ 700ಕ್ಕೂ ಹೆಚ್ಚು ಪೊಲೀಸರ ನಿಯೋಜನೆ