ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿರುವುದರಿಂದ ಶೈಕ್ಷಣಿಕ ವರ್ಷ ಹಾಗೂ ಪರೀಕ್ಷೆಗಳನ್ನು ತಡವಾಗಿ ನಡೆಸಲಾಗುತ್ತಿದೆ. ಈ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನ ನಡೆಸಲು ಇಲಾಖೆ ನಿರ್ಧರಿಸಿ, ಈಗಿರುವಾಗ ಅವಧಿಗೂ ಮುನ್ನವೇ ನಗರದ ಹಲವೆಡೆ ಕಾಲೇಜುಗಳು ಅಡ್ಮಿಷನ್ ಶುರು ಮಾಡಲು ಮುಂದಾಗಿವೆ.
ಹೀಗಾಗಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, 2021-22ನೇ ಸಾಲಿನ ಪ್ರಥಮ ಪಿಯುಸಿ ತರಗತಿ ವಿದ್ಯಾರ್ಥಿಗಳಿಗೆ ದಾಖಲಾತಿ ಮಾಡುವಂತಿಲ್ಲ. ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಬಂದ ನಂತರ ಹಾಗೂ ಬೋರ್ಡ್ ದಾಖಲಾತಿ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದ ನಂತರವೇ ಮಾಡಿಕೊಳ್ಳಲು ಸೂಚಿಸಿದೆ.
ಅಲ್ಲಿಯವರೆಗೆ ಯಾವುದೇ ರೀತಿಯಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ನೀಡುವಂತಿಲ್ಲ, ಆನ್ಲೈನ್ ತರಗತಿಗಳನ್ನ ಸಹ ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಈ ಆದೇಶದ ಹೊರತಾಗಿಯೂ ಯಾವುದೇ ಕಾಲೇಜುಗಳಲ್ಲಿ ದಾಖಲಾತಿಗಳು ನಡೆಸಿ, ಆನ್ಲೈನ್ ತರಗತಿ ನಡೆಯೋದು ತಿಳಿದು ಬಂದರೆ ಕಠಿಣ ಶಿಸ್ತುಕ್ರಮದ ಜೊತೆಗೆ ಕಾಲೇಜುಗಳ ಮಾನ್ಯತೆ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ರಾಜ್ಯದ ಎಲ್ಲ ಜಿಲ್ಲೆಗಳ ಪಿಯು ಉಪನಿರ್ದೇಶಕರು ಸೂಕ್ತ ನಿಗಾವಹಿಸುವಂತೆ, ಈ ಮಾಹಿತಿಯನ್ನ ಎಲ್ಲ ಕಾಲೇಜುಗಳ ಪ್ರಾಂಶುಪಾಲರ ಗಮನಕ್ಕೆ ತರುವಂತೆ ತಿಳಿಸಲಾಗಿದೆ.