ಬೆಂಗಳೂರು: ನಗರದಲ್ಲಿ ಸಾರ್ವಜನಿಕರು ಹಾಗೂ ಸಂಚಾರಿ ಪೊಲೀಸ್ ಇಲಾಖೆಯ ಟೋಯಿಂಗ್ ಸಿಬ್ಬಂದಿ ನಡುವೆ ಜಟಾಪಟಿ ಮುಂದುವರೆದಿದೆ. ಇತ್ತೀಚೆಗಷ್ಟೇ ಯಲಹಂಕ ನ್ಯೂಟೌನ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಮಾಸುವ ಮುನ್ನವೇ ಮತ್ತೊಮ್ಮೆ ಟೋಯಿಂಗ್ ವಾಹನದ ಸಿಬ್ಬಂದಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಹಿಗ್ಗಾಮುಗ್ಗಾ ಎಳೆದಾಡಿ, ಥಳಿಸುವ ಮೂಲಕ ಟೋಯಿಂಗ್ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿರುವ ದೃಶ್ಯ ವೈರಲ್ ಆಗುತ್ತಿವೆ. ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ನೋ ಪಾರ್ಕಿಂಗ್ ಫಲಕವಿಲ್ಲದಿದ್ದರೂ ಸಹ ಪಾರ್ಕಿಂಗ್ ನಲ್ಲಿರುವ ವಾಹನಗಳನ್ನೇ ಕೊಂಡೊಯ್ಯುವ ಮೂಲಕ ಸುಖಾಸುಮ್ಮನೆ ದಂಡ ಹಾಕಲಾಗುತ್ತಿದೆ ಎಂದು ಆರೋಪಿಸಿದ ಸಾರ್ವಜನಿಕ ಗುಂಪು ಇಂದು ಮತ್ತೆ ಬಂದಿದ್ದ ಹಲಸೂರು ಸಂಚಾರಿ ಠಾಣಾ ವ್ಯಾಪ್ತಿಯ ಟೋಯಿಂಗ್ ಸಿಬ್ಬಂದಿಯನ್ನ ಥಳಿಸಿದೆ.
ಟೋಯಿಂಗ್ ಸಿಬ್ಬಂದಿ ಹಾಗೂ ವಾಹನಗಳ ಮಾಲೀಕರ ನಡುವಿನ ಕಿತ್ತಾಟ ಇಂದು ನಿನ್ನೆಯದಲ್ಲ. ವಾರದ ಹಿಂದೆ ಸಹ ಟೋಯಿಂಗ್ ಸಿಬ್ಬಂದಿಗೆ ಹೆಲ್ಮೆಟ್ ನಿಂದ ಹೊಡೆದು ಗಲಾಟೆ ಮಾಡಿದ್ದ ಬೈಕ್ ಸವಾರನನ್ನ ಯಲಹಂಕ ನ್ಯೂಟೌನ್ ಪೊಲೀಸರು ಬಂಧಿಸಿದ್ದರು. ಇವತ್ತೂ ಸಹ ಅಂಥದ್ದೇ ಘಟನೆ ನಡೆದಿದೆ.
ಅಸಲಿಗೆ ಟೋಯಿಂಗ್ ಮಾಡುವ ಮುನ್ನ ವಾಹನದ ಮಾಲೀಕ ಮಾಡಿರುವ ಉಲ್ಲಂಘನೆಗೆ ಸಾಕ್ಷ್ಯವಾಗಿ ಫೋಟೋ ಕ್ಲಿಕ್ಕಿಸಬೇಕು, ಬಳಿಕ ಟೋಯಿಂಗ್ ವಿಚಾರವನ್ನ ಅನೌನ್ಸ್ ಮಾಡಿ ನಂತರ ವಾಹನವನ್ನ ಟೋ ಮಾಡಬೇಕು. ಆದರೆ ಬಹುತೇಕ ಸಂದರ್ಭಗಳಲ್ಲಿ ಈ ನಿಯಮ ತದ್ವಿರುದ್ಧವಾಗಿದೆ. ಇನ್ನೂ ಕೆಲವೆಡೆ ಜನರೇ ಟೋಯಿಂಗ್ ಸಿಬ್ಬಂದಿಯನ್ನ ಸುತ್ತುವರೆಯುತ್ತಿರುವ ಘಟನೆಗಳೂ ನಡೆಯುತ್ತಿವೆ.
ಇವತ್ತಿನ ಘಟನೆ ಬಳಿಕ ಟೋಯಿಂಗ್ ಸಿಬ್ಬಂದಿ ಪರವಾಗಿ ಹಲಸೂರು ಠಾಣಾ ಎಎಸ್ಐ ರಾಜೇಂದ್ರ ದೂರಿನನ್ವಯ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.