ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಪಿಎಸ್ಐ ನೇಮಕಾತಿ ಹಗರಣ ಪ್ರಕರಣದ ಕುರಿತು ನಿಯಮ 330 ರ ಅಡಿ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ರೂಲಿಂಗ್ ನೀಡಿದರು.
ವಿಧಾನ ಪರಿಷತ್ ಕಲಾಪದಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಕುರಿತು ನಿಯಮ 59 ರ ಅಡಿ ಚರ್ಚೆಗೆ ಅವಕಾಶ ನೀಡುವಂತೆ ಸದಸ್ಯ ತಿಪ್ಪೇಸ್ವಾಮಿ ನಿಲುವಳಿ ಸೂಚನೆ ಮಂಡಿಸಿದರು. ಆದರೆ, ಕಾನೂನು ಸಚಿವ ಮಾಧುಸ್ವಾಮಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದು ನಿನ್ನೆ ಮೊನ್ನೆ ನಡೆದ ಘಟನೆ ಅಲ್ಲ, ಕೋರ್ಟ್ನಲ್ಲಿಯೂ ಇದೆ, ಇದು ಚರ್ಚೆ ಮಾಡಲು ಬರಲ್ಲ. ಹಾಗಾಗಿ ನಿಲುವಳಿ ತಿರಸ್ಕಾರ ಮಾಡಿ ಎಂದು ಮನವಿ ಮಾಡಿದರು.
ಈ ವೇಳೆ, ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ನಿಯಮ 59ರ ಅಡಿ ತರಬೇಕಾದರೆ ಇತ್ತೀಚೆಗೆ ಘಟನೆ ಆಗಬೇಕು ಎನ್ನುತ್ತಾರೆ, ನಾವು ಕೋರ್ಟ್ ನಲ್ಲಿ ಇರುವ ವಿಷಯ ಚರ್ಚಿಸಲ್ಲ, ವಾಸ್ತವ ಕುರಿತು ಚರ್ಚಿಸುವುದರಲ್ಲಿ ತಪ್ಪಿಲ್ಲ, ಹಾಗಾಗಿ ಅವಕಾಶ ಕಲ್ಪಿಸಿ ಎಂದರು.
(ಇದನ್ನೂ ಓದಿ: ಈ ವರ್ಷದಿಂದಲೇ ಭಗವದ್ಗೀತೆ ಬೋಧನೆ : ಸಚಿವ ಬಿ ಸಿ ನಾಗೇಶ್)
ಇದಕ್ಕೂ ಆಕ್ಷೇಪಿಸಿದ ಸಚಿವ ಮಾಧುಸ್ವಾಮಿ, ನಿಯಮ 59ರ ಅಡಿ ಬರಲ್ಲ. 68 ರ ಅಡಿ ಕೆಳ ಸದನದಲ್ಲಿ ಚರ್ಚೆಗೆ ಒಪ್ಪಿದ್ದಾರೆ ಎಂದರು. ಈ ವೇಳೆ ಪ್ರತಿಪಕ್ಷ ಸದಸ್ಯರು ಯಾವುದೇ ವಿಧವಾಗಲಿ ಒಟ್ಟಿನಲ್ಲಿ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವರು ಬೇರೆ ರೂಪದಲ್ಲಿ ಚರ್ಚೆಗೆ ನಮ್ಮ ವಿರೋಧವಿಲ್ಲ, ಹಿಂದಿನ ಕಾಲದ್ದು ಸೇರಿ ಎಲ್ಲ ಚರ್ಚೆಗೆ ಸಿದ್ಧವಿದ್ದೇವೆ ಎಡರೂ ಕಡೆ ಬೇಕಾದಷ್ಟು ಮಾಹಿತಿ ಇದೆ ಚರ್ಚಿಸೋಣ ಎಂದು ತಿಳಿಸಿದರು.
ಇದಕ್ಕೆ ಟಾಂಗ್ ನೀಡಿದ ಹರಿಪ್ರಸಾದ್, ಯಾರು ಬೇಡ ಅಂದರು, ಎಲ್ಲ ಕಾಲದ ಚರ್ಚೆ ಮಾಡಲು ಸಿದ್ಧವಿದ್ದೇವೆ ಎಂದರು. ಈ ವೇಳೆ, ಕಾಂಗ್ರೆಸ್ ಸದಸ್ಯ ವೆಂಕಟೇಶ್ ಸರ್ಕಾರದ ವಿರುದ್ಧ ಕಿಡಿಕಾರಿದರು. ಹಳೆಯದ್ದು ಎಂದು ಹೆದರುಸುತ್ತೀರಾ ಯಾರಿಗೆ ಹೇಳುತ್ತೀರಾ ಎನ್ನುತ್ತಾ ಆಕ್ಷೇಪಾರ್ಹ ಪದ ಪ್ರಯೋಗಿಸಿದರು. ಇದಕ್ಕೆ ಸಚಿವ ಮಾಧುಸ್ವಾಮಿ ತಿರುಗೇಟು ನೀಡಿದರು.
ಈ ವೇಳೆ, ಬಿಜೆಪಿ ಸದಸ್ಯೆಯರಾದ ತೇಜಸ್ವಿನಿ, ಭಾರತಿ ಶೆಟ್ಟಿ, ನಮ್ಮ ಹಕ್ಕು ಚ್ಯುತಿಯಾಗಿದೆ, ವೆಂಕಟೇಶ್ ಪದ ಬಳಕೆ ಕಡತದಿಂದ ತೆಗೆದು ಹಾಕಿ ಎಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಭಾಪತಿ, ಅನುಮತಿ ಪಡೆಯದೇ ಮಾತನಾಡಿದ ಎಲ್ಲ ವಿಷಯ ಕಡತಕ್ಕೆ ಹೋಗಬಾರದು ಎಂದು ರೂಲಿಂಗ್ ನೀಡಿದರು.
ನಂತರ ಸದಸ್ಯ ತಿಪ್ಪೇಸ್ವಾಮಿ, ಈ ಹಿಂದೆ ನಿಯಮ ಬದಲಾಯಿಸಿ ಚರ್ಚೆಗೆ ಅವಕಾಶ ಕಲ್ಪಿಸಿದ ಉದಾಹರಣೆ ಇದೆ, ಅದರಂತೆ ಮಾಡಿಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಸಭಾಪತಿ ರಘುನಾಥರಾವ್ ಮಲ್ಕಾಪುರೆ ನಿಯಮ 330 ರ ಅಡಿ ಚರ್ಚೆಗೆ ಅವಕಾಶ ನೀಡಿ ರೂಲಿಂಗ್ ನೀಡಿದರು.
(ಇದನ್ನೂ ಓದಿ: ಪೊಲೀಸರಿಗಿಲ್ಲ ಶಿಕ್ಷೆ ಪ್ರಶ್ನಿಸುವ ಹಕ್ಕು: ಶಿಸ್ತು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಅಧಿಕಾರ ಮೊಟಕು?!)