ಬೆಂಗಳೂರು : ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಪರೀಕ್ಷಾ ಅಕ್ರಮದ ಆರೋಪ ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಆಯ್ಕೆ ಪಟ್ಟಿಯಲ್ಲಿರುವ ಉಳಿದ ಅಭ್ಯರ್ಥಿಗಳಿಗೆ ಮತ್ತೆ ಪರೀಕ್ಷೆ ನಡೆಸುವ ಕುರಿತು ಮಾಹಿತಿ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಜುಲೈ 5ರವರೆಗೆ ಕಾಲಾವಕಾಶ ನೀಡಿದೆ.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದ ಆರೋಪದಲ್ಲಿ ನೇಮಕಾತಿ ಸಂಬಂಧದ ಅಧಿಸೂಚನೆ ರದ್ದು ಪಡಿಸಿ, ನೂತನವಾಗಿ ಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಆರೋಪ ರಹಿತ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ ನರೇಂದ್ರ ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅರ್ಜಿಯ ಸಂಬಂಧ ಈ ಹಿಂದೆ ನಡೆಸಿದ್ದ ವಿಚಾರಣೆ ವೇಳೆ (ಜೂ.15)ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, 545 ಪಿಎಸ್‌ಐ ಹುದ್ದೆಗಳಿಗೆ ಆಯ್ಕೆಯಾಗಿದ್ದ ಅಭ್ಯರ್ಥಿಗಳಲ್ಲಿ ಚಾರ್ಜ್‌ಶೀಟ್‌ನಲ್ಲಿ ಹೆಸರಿರುವವರನ್ನು ಹೊರತುಪಡಿಸಿ ಉಳಿದವರಿಗೆ ಮಾತ್ರ ಪರೀಕ್ಷೆ ನಡೆಸಬಹುದೇ, ಆ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ಅವರನ್ನು ಹುದ್ದೆಗೆ ಪರಿಗಣಿಸಲು ಸಾಧ್ಯವೇ? ಎಂಬ ಬಗ್ಗೆ ಸರ್ಕಾರದಿಂದ ಮಾಹಿತಿ ಪಡೆದು ಕೋರ್ಟ್‌ಗೆ ತಿಳಿಸುವಂತೆ ರಾಜ್ಯ ಅಡ್ವೊಕೇಟ್ ಜನರಲ್ (ಎಜಿ) ಶಶಿಕಿರಣ್ ಶೆಟ್ಟಿ ಅವರಿಗೆ ಸೂಚನೆ ನೀಡಲಾಗಿತ್ತು.
ಈ ಅರ್ಜಿಯು ಮಂಗಳವಾರ ವಿಚಾರಣೆಗೆ ಬಂದಾಗ ಅಡ್ವೋಕೇಟ್ ಜನರಲ್ ಹಾಜರಾಗಿ, ಹೈಕೋರ್ಟ್ ಸೂಚನೆಯಂತೆ ಆರೋಪ ಪಟ್ಟಿಯಲ್ಲಿ ಹೆಸರಿರದ ಅಭ್ಯರ್ಥಿಗಳಿಗಷ್ಟೇ ಮರು ಪರೀಕ್ಷೆ ನಡೆಸುವ ಸಾಧ್ಯತೆ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಈ ಕುರಿತ ನಿರ್ಧಾರ ತಿಳಿಸಲು ಕೊಂಚ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು. ಅದನ್ನು ಪರಿಗಣಿಸಿದ ಪೀಠ, ಸರ್ಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಜು.5ಕ್ಕೆ ಮುಂದೂಡಿತು.
ಇದನ್ನೂ ಓದಿ: ಮೇಕೆ ವಿಚಾರವಾಗಿ ಜಗಳ: ವೃದ್ಧೆ ಸಾವಿಗೆ ಕಾರಣವಾಗಿದ್ದ ಆರೋಪಿತೆಯ ಶಿಕ್ಷೆ ರದ್ದುಗೊಳಿಸಿದ ಹೈಕೋರ್ಟ್
ಪ್ರಕರಣದ ಹಿನ್ನೆಲೆ ಏನು?: 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸುವುದಾಗಿ 2022ರ ಏ.29ರಂದು ಅಂದಿನ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶ ರದ್ದುಪಡಿಸಬೇಕು. ಕಳಂಕರಹಿತ ಮತ್ತು ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ ಹಿಂದಿನ ಅಧಿಸೂಚನೆ ಪ್ರಕಾರವೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕೆಲ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದರು.
ಆ ಅರ್ಜಿಗಳನ್ನು ಕೆಎಟಿ 2022ರ ಜು. 19ರಂದು ವಜಾಗೊಳಿಸಿತ್ತು. ಇದರಿಂದ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯನ್ನು 2022ರ ಸೆ. 28ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.