ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣದ ಆರೋಪಿಯಾಗಿರುವ ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತ್ ಪಾಲ್ ಅವರನ್ನು ಎಂಟು ದಿನಗಳ ಕಾಲ ಸಿಐಡಿ ಪೊಲೀಸರ ವಶಕ್ಕೆ ನೀಡಿ ನಗರದ ಎಸಿಎಂಎಂ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಸಿಐಡಿ ಮನವಿ ಪುರಸ್ಕರಿಸಿದ ಬೆಂಗಳೂರಿನ ಒಂದನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯವು ಸೆ.12ರ ವರೆಗೆ ಅಮೃತ್ ಪೌಲ್ ಅವರನ್ನು ಸಿಐಡಿ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ.
ಪ್ರಕರಣದಲ್ಲಿ ಏಳನೇ ಆರೋಪಿಯಾಗಿರುವ ಅಮೃತ್ ಪಾಲ್ ಅವರು ಲಕ್ಷಾಂತರ ರೂಪಾಯಿ ಪಡೆದು ಅಕ್ರಮ ಎಸಗಿರುವ ಸಾಧ್ಯತೆಯಿದೆ. ಕೃತ್ಯ ಎಸಗಲು ಪಾಲ್ ಅವರು ಬಳಸಿರಬಹುದಾದ ಮೊಬೈಲ್ ಸಿಮ್ ಕಾರ್ಡ್‌ಗಳ ಬಗ್ಗೆ ವಿಚಾರಣೆ ನಡೆಸಬೇಕಿದೆ. ಪೌಲ್ ಅವರು ಹೊಂದಿರುವ ಬ್ಯಾಂಕ್ ಖಾತೆಗಳ ವಿವರ ಕಲೆ ಹಾಕಿ, ಹಣದ ವರ್ಗಾವಣೆ ಕುರಿತು ತನಿಖೆ ನಡೆಸಬೇಕಿದೆ.
ಆರೋಪಿಯ ಊರಿಗೆ ಭೇಟಿ ನೀಡಿ ಸಾಕ್ಷ್ಯಾಧಾರ ಸಂಗ್ರಹಿಸಬೇಕಿದೆ. ಆದ್ದರಿಂದ ಅವರನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಸಿಐಡಿ ಕೋರಿತ್ತು. ಆದರೆ, ಪಾಲ್ ಅವರನ್ನು 8 ದಿನಗಳ ಕಾಲ ಸಿಐಡಿ ಪೊಲೀಸ್ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿತು. ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಈಗಾಗಲೇ ಹಲವರನ್ನ ಬಂಧಿಸಿ, ಸಿಐಡಿ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ.
(ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮವು ಮಧ್ಯಪ್ರದೇಶದ ವ್ಯಾಪಂ ಹಗರಣದಷ್ಟೇ ದೊಡ್ಡದು: ಸಿಐಡಿ)