ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಜೆ.ಮಂಜುನಾಥ್ ಹಾಗೂ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ್ ಅವರನ್ನು ಎಸಿಬಿ ಬಂಧಿಸಿದೆ. ಭಾರತೀಯ ಸಿವಿಲ್ ಸೇವೆ ನಿಯಮದ ಪ್ರಕಾರ, ಬಂಧನಕ್ಕೊಳಗಾಗಿರುವ ಮಂಜುನಾಥ್ ಅವರನ್ನು ಸರ್ಕಾರ ಸೇವೆಯಿಂದ ಅಮಾನತು ಮಾಡಿದೆ. ಮಂಜುನಾಥ್ ಅವರನ್ನು ಇತ್ತೀಚೆಗೆ ಸರ್ಕಾರ ಸಮಗ್ರ ಮಕ್ಕಳ ಸಂರಕ್ಷಣಾ ಯೋಜನೆಯ ನಿರ್ದೇಶಕರಾಗಿ ಎತ್ತಂಗಡಿ ಮಾಡಿತ್ತು. ಸರ್ಕಾರದ ಲಿಖಿತ ಅನುಮತಿ ಇಲ್ಲದೇ ಆರೋಪಿತ ಅಧಿಕಾರಿ ಕೇಂದ್ರಸ್ಥಾನ ಬಿಟ್ಟು ತೆರಳುವಂತಿಲ್ಲ.
ಇದನ್ನೂ ಓದಿ: ಉದಯಪುರ ಹತ್ಯೆ ಪ್ರಕರಣ: ಹಿಂದೂಪರ ಸಂಘಟನೆಗಳಿಂದ ಬಳ್ಳಾರಿ ಬಂದ್
ಅದೇ ರೀತಿ, ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ ಸಂಬಂಧ ಸಿಐಡಿಯಿಂದ ಬಂಧನಕ್ಕೊಳಗಾಗಿರುವ ಎಡಿಜಿಪಿ ಅಮೃತ್ ಪೌಲ್ ಅವರನ್ನೂ ಸಹ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇವರು ಪ್ರಸ್ತುತ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಆಗಿದ್ದರು. ಸರ್ಕಾರದ ಲಿಖಿತ ಅನುಮತಿ ಇಲ್ಲದೇ ಆರೋಪಿತ ಅಧಿಕಾರಿ ಕೇಂದ್ರ ಸ್ಥಾನ ಬಿಟ್ಟು ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.