ಬೆಂಗಳೂರು : ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ನೇಮಕಾತಿ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದು, ಕಳೆದ ಕೆಲವು ತಿಂಗಳುಗಳಿಂದ ಕಾಣೆಯಾಗಿದ್ದ ಪಿಎಸ್ಐ ಅನ್ನು ಸಿಐಡಿ ಬಂಧಿಸಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ನವೀನ್ ಪ್ರಸಾದ್ ಬಂಧಿತ ಆರೋಪಿ.
ನೇಮಕಾತಿ ಹಗರಣದಲ್ಲಿ ನವೀನ್ ಪ್ರಸಾದ್ ಹಾಗೂ ಅದೇ ಠಾಣೆಯ ಮತ್ತೋರ್ವ ಪಿಎಸ್ಐ ಹರೀಶ್ ನೇಮಕಾತಿ ಅಭ್ಯರ್ಥಿಗಳೊಂದಿಗೆ ಹಣದ ವ್ಯವಹಾರ ನಡೆಸಿದ್ದರು ಎಂದು ಹೇಳಲಾಗಿದೆ. ಈಗಾಗಲೇ ಬಂಧಿತನಾಗಿರುವ ಪಿಎಸ್ಐ ಹರೀಶ್ ಎಂಬವರನ್ನು ಸಿಐಡಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನವೀನ್ ಪ್ರಸಾದ್ ಕೂಡ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನವೀನ್ ಪ್ರಸಾದ್ ಗಾಗಿ ತನಿಖಾಧಿಕಾರಿಗಳು ನಿರಂತರ ಹುಡುಕಾಟ ನಡೆಸುತ್ತಿದ್ದರು.
ಆರೋಪಿ ಹರೀಶ್, 14ನೇ ಆರೋಪಿ ಆರ್.ಮಧು ಹಾಗೂ 16ನೇ ಆರೋಪಿ ದಿಲೀಪ್ ಕುಮಾರ್ (ಅಭ್ಯರ್ಥಿಗಳು) ಎಂಬವರಿಗೆ ಪರೀಕ್ಷೆಯಲ್ಲಿ ಸಹಾಯ ಮಾಡುವ ಬಗ್ಗೆ ಭರವಸೆ ನೀಡಿದ್ದರು. ಈ ಸಂಬಂಧ 33ನೇ ಆರೋಪಿಯಾದ ಮೀಸಲು ಪೊಲೀಸ್ ಇನ್‌ಸ್ಪೆಕ್ಟರ್ ಮಧು ಜತೆ ಒಳಸಂಚು ರೂಪಿಸಿದ್ದ ಹರೀಶ್, ಇಬ್ಬರು ಅಭ್ಯರ್ಥಿಗಳಿಂದಲೂ ತಲಾ 30 ಲಕ್ಷ ರೂ. ಗಳಂತೆ ಒಟ್ಟು 60 ಲಕ್ಷ ರೂಪಾಯಿ ಪಡೆದಿದ್ದರು. ಇದಾದ ಬಳಿಕ 33ನೇ ಆರೋಪಿಯ ಮೂಲಕ 29ನೇ ಆರೋಪಿಯಾದ ನೇಮಕಾತಿ ವಿಭಾಗದ ಪ್ರಥಮ ದರ್ಜೆ ಸಹಾಯಕ ಡಿ.ಹರ್ಷ ಎಂಬವರಿಗೆ ಹಣ ಹಾಗೂ ಕಾರ್ಬನ್ ಒಎಂಆರ್ ಶೀಟ್‌ಗಳನ್ನು ತಲುಪಿಸಿದ್ದರು. ಎಫ್‌ಎಸ್‌ಎಲ್ ವರದಿಯಲ್ಲೂ 14 ಹಾಗೂ 16ನೇ ಆರೋಪಿಗಳ ಒಎಂಆರ್ ಶೀಟ್ ತಿದ್ದಿರುವುದು ಸಾಬೀತಾಗಿದೆ ಎಂದು ಸಿಐಡಿಯ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು.
2022ರ ಸೆಪ್ಟೆಂಬರ್ ತಿಂಗಳಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಬಿಜೆಪಿ ಮುಖಂಡ ರಾಜೇಶ್ಗೆ ಐದೂವರೆ ತಿಂಗಳ ನಂತರ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಅಕ್ರಮದ ಕೇಂದ್ರ ಬಿಂದುವಾದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಹಾಗೂ ಅಕ್ರಮದ ಕಿಂಗ್ಪಿನ್ಗಳಲ್ಲಿ ಒಬ್ಬರಾದ ದಿವ್ಯಾ ಹಾಗರಗಿ ಅವರ ಪತಿ ರಾಜೇಶ್ ಹಾಗರಗಿಗೆ ಹಲವು ಷರತ್ತು ವಿಧಿಸಿ ಕೋರ್ಟ್ ಜಾಮೀನು ನೀಡಿತ್ತು.
ಇದನ್ನೂ ಓದಿ : ಪಿಎಸ್ಐ ಹಗರಣದ ಆರೋಪಿ ಹರೀಶ್ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್