ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷಾ ಹಗರಣದಲ್ಲಿ ಸಚಿವರ ಹಾಗೂ ಐಪಿಎಸ್ ಅಧಿಕಾರಿಗಳ ಹೆಸರು ಕೇಳಿ ಬರುತ್ತಿದ್ದು, ಈ ಜಾಲದಲ್ಲಿ ದೊಡ್ಡವರ ಕೈವಾಡವಿರುವ ಶಂಕೆ ಇದೆ. ಹೀಗಾಗಿ ಕೂಡಲೇ ಅಂತಹವರ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಬೇಕೆಂದು ರಾಜ್ಯ ವಕೀಲ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್ ನೇತೃತ್ವದ ವಕೀಲರ ನಿಯೋಗ ಆಗ್ರಹಿಸಿದೆ.
ಬೆಂಗಳೂರಿನ ಸಿಐಡಿ ಪ್ರಧಾನ ಕಚೇರಿಗೆ ತೆರಳಿ ವಕೀಲರ ನೇತೃತ್ವದ ನಿಯೋಗವು ಮನವಿ ಸಲ್ಲಿಸಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಂಗನಾಥ್, ಪಿಎಸ್ಐ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಪರೀಕ್ಷಾ ಅಕ್ರಮ ಪ್ರಕರಣಗಳ ಹಿಂದೆ ಬಂಧಿಸಿರುವ ಆರೋಪಿಗಳು ಅಂದುಕೊಂಡಂತೆ ಕಿಂಗ್ಪಿನ್ಗಳಲ್ಲ. ಕೇವಲ ಮಧ್ಯವರ್ತಿಗಳು ಮಾತ್ರ. ಇವರ ಹಿಂದೆ ಹಾಲಿ ಸಚಿವರು, ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಭಾಗಿಯಾಗಿದ್ದಾರೆ. ಅಲ್ಲದೇ, ಮಾಜಿ ಮುಖ್ಯಮಂತ್ರಿಯೊಬ್ಬರ ಮಗ ಸಹ ಈ ದಂಧೆಯಲ್ಲಿ ಭಾಗಿಯಾಗಿರುವ ಮಾಹಿತಿಯಿದೆ ಎಂದು ದೂರಿದರು.
ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಅಕ್ರಮಕ್ಕೆ ಸಹಕಾರ ನೀಡಲಾಗಿದೆ. ಒಎಂಆರ್ ಶೀಟ್ ಬದಲಾಯಿಸಿ ಹಣ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಹೀಗಾಗಿ ಪ್ರಕರಣದ ರೂವಾರಿ ಎನ್ನಿಸಿಕೊಂಡಿರುವ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಕಾರ್ ಪಾರ್ಕಿಂಗ್ ವಿಚಾರದಲ್ಲಿ ಪೊಲೀಸರು ಹಾಗೂ ವಕೀಲರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ತಿಳಿಗೊಂಡ ಬಳಿಕ ಸಿಐಡಿ ಅಧಿಕಾರಿಯೊಬ್ಬರು ಬಂದು ಪ್ರವೇಶದ್ವಾರದಲ್ಲೇ ದೂರು ಸ್ವೀಕರಿಸಿದರು.
ಇದನ್ನೂ ಓದಿ: ಪಿಎಸ್ಐ ಹಗರಣ ಪೂರ್ವ ನಿಯೋಜಿತ ಕೃತ್ಯ: ಸಿದ್ದರಾಮಯ್ಯ