ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಹಿನ್ನೆಲೆಯಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಹಾಗೂ ಟಿ.ಶಫಿಯುಲ್ಲಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಪ್ರಕರಣದ ವಿಚಾರಣೆಯು ಹೈಕೊರ್ಟ್ ನ್ಯಾ. ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ನಡೆಯಿತು. ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಜಿಗ್ನೇಶ್ ಮೇವಾನಿ ವಕೀಲರು ಹೈಕೋರ್ಟ್ಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರು ವಾದ ಮಂಡಿಸಿ ದೂರಿಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಅಲ್ಲದೇ ಅರ್ಜಿದಾರರ ಪ್ರಚೋದನಕಾರಿ ಹೇಳಿಕೆಗೆ ಸಾಕ್ಷ್ಯಗಳು ಲಭ್ಯವಾಗಿವೆ. ಆದ್ದರಿಂದ ಈ ಹಂತದಲ್ಲಿ ಪ್ರಕರಣ ರದ್ದುಗೊಳಿಸಬಾರದು ಎಂದು ವಾದಿಸಿದರು. ಇನ್ನು ಮೇವಾನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ:
2018ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೋಮು ಸೌಹಾರ್ದ ವೇದಿಕೆ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂವಾದ ಕಾರ್ಯಕ್ರಮದಲ್ಲಿ ಜಗ್ನೇಶ್ ಮೇವಾನಿ ಮಾತನಾಡಿ, ಏಪ್ರಿಲ್ 15ರಂದು ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬರ್ತಾರೆ. ಈ ಸಂದರ್ಭದಲ್ಲಿ ಕರ್ನಾಟಕದ ಯುವ ಜನತೆಯ ಪಾತ್ರ ಮುಖ್ಯವಾಗಿದೆ. ಪ್ರಧಾನಿಯವರ ಪ್ರಚಾರ ಸಭೆಗೆ ನುಗ್ಗಿ ಕುರ್ಚಿಗಳನ್ನು ಎಸೆದಾಡಿ ಗಲಾಟೆ ಮಾಡಿ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುವ ಭರವಸೆ ಏನಾಯಿತು ಎಂದು ಮೋದಿಯವರನ್ನು ಪ್ರಶ್ನಿಸಬೇಕು. ಅದಕ್ಕೆ ಮೋದಿ ಉತ್ತರ ಕೊಡದಿದ್ದರೆ ಹಿಮಾಲಯಕ್ಕೆ ಹೋಗಿ ರಾಮ ಮಂದಿರ ಹಿಡಿದು ಗಂಟೆ ಬಾರಿಸುತ್ತ ಕುಳಿತುಕೊಳ್ಳುವಂತೆ ಅವರಿಗೆ ಹೇಳಿಕೆ ನೀಡಿದ್ದರು ಎನ್ನಲಾಗಿದೆ.
ಇನ್ನು ಮೇವಾನಿ ಪ್ರಚೋದನಕಾರಿ ಭಾಷಣದ ಸಂಬಂಧ ಚುನಾವಣಾ ಅಧಿಕಾರಿ ಟಿ. ಜಯಂತ್ ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.