ಬೆಂಗಳೂರು : ಹೊಸ ವರ್ಷದ ಆರಂಭದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ನೀಡಲು ಬಾಕಿಯಿರುವ 3 ತಿಂಗಳ ಪಡಿತರವನ್ನು ವಿತರಣೆ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ತಿಳಿಸಿದೆ.
ಬಿಸಿಯೂಟ ಯೋಜನೆಯ ಪಡಿತರ ವಿತರಣೆ ವಿಳಂಬ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ಗೆ ರಾಜ್ಯ ಸರ್ಕಾರ ಈ ಮಾಹಿತಿ ನೀಡಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕಾರ್ಯದರ್ಶಿಯವರು, ಶಾಲಾ ಮಕ್ಕಳಿಗೆ ಬಿಸಿಯೂಟದ ಯೋಜನೆಯ ಆಹಾರ ಧಾನ್ಯವನ್ನು ಜನವರಿ 15 ರೊಳಗೆ ವಿತರಣೆ ಮಾಡಲು ಕ್ರಮ ತಗೆದುಕೊಳ್ಳಲಾಗುವುದೆಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಸರ್ಕಾರದ ಈ ಮನವಿಯನ್ನು ಪುರಸ್ಕರಿಸಿದೆ.
ಶಾಲಾ ಮಕ್ಕಳಿಗೆ ವಿತರಿಸಬೇಕಾದ ಆಹಾರ ಧಾನ್ಯ ಪದಾರ್ಥಗಳ ಅಂತಿಮಗೊಳಿಸುವಿಕೆ ಮತ್ತು ಪ್ರಮಾಣ ನಿಗದಿಪಡಿಸಲು ವಿಳಂಬವಾಗಿದ್ದರಿಂದ ಆಗಷ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ವಿತರಣೆ ನಿರೀಕ್ಷಿತ ಸಮಯದಲ್ಲಿ ವಿತರಿಸಲು ಸಾಧ್ಯವಾಗಲಿಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.