ಬೆಂಗಳೂರು: ಸುರಕ್ಷಿತ ಪಾದಚಾರಿ ಮಾರ್ಗ ಸೌಲಭ್ಯ ಪಡೆಯುವುದು ಸಾರ್ವಜನಿಕರ ಹಕ್ಕು. ಸುಸಜ್ಜಿತ ರಸ್ತೆ ಜೊತೆಗೆ ಸುರಕ್ಷಿತ ಪಾದಚಾರಿ ಮಾರ್ಗ ವ್ಯವಸ್ಥೆ ಬೇಕೆ ಬೇಕು. ಆದ್ರೆ ರಾಜ್ಯ ರಾಜಧಾನಿಯಲ್ಲೇ ಅನೇಕ ಕಡೆಗಳಲ್ಲಿ ಸೂಕ್ತ ಪಾದಚಾರಿ ಮಾರ್ಗಗಳಿಲ್ಲದೆ ಸಾವು-ನೋವು ಸಂಭವಿಸುತ್ತಿವೆ. ಪಾದಚಾರಿ ಮಾರ್ಗ ನಿರ್ವಹಣೆಯಲ್ಲಿ ಬಿಬಿಎಂಪಿ ಸೋತಿದೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಸಿಲಿಕಾನ್ ಸಿಟಿಗೆ ದೇಶದಲ್ಲೇ ಅತಿ ಹೆಚ್ಚು ಪಾದಚಾರಿಗಳ ಸಾವು ಸಂಭವಿಸುತ್ತಿರುವ ನಗರ ಎಂಬ ಕುಖ್ಯಾತಿ ಇದೆ. ಇನ್ನೂ ಕೂಡ ನಗರದ ಅನೇಕ ಪಾದಚಾರಿ ಮಾರ್ಗಗಳು ನಿರ್ವಹಣೆಯಾಗುತ್ತಿಲ್ಲ. ಫುಟ್ಪಾತ್ ಸ್ಲಾಬ್ಗಳು ಮುರಿದಿವೆ. ಅದೆಷ್ಟೋ ಕಡೆಗಳಲ್ಲಿ ಸಣ್ಣ-ಪುಟ್ಟ ಅಂಗಡಿಗಳು, ವಾಹನಗಳು ಫುಟ್ಪಾತ್ ಆಕ್ರಮಿಸಿಕೊಂಡಿವೆ. ಪಾದಚಾರಿಗಳಿಗೆ ಸಂಚರಿಸಲು ಪಾದಚಾರಿ ಮಾರ್ಗವೇ ಇಲ್ಲದಂತಾಗಿದೆ. ವಯಸ್ಸಾದವರು, ಹಿರಿಯರು ಈಗಿರುವ ಪಾದಾಚಾರಿ ಮಾರ್ಗಗಳಲ್ಲಿ ನಡೆಯಲು ಅಸಾಧ್ಯ ಎಂಬಂತಹ ಸ್ಥಿತಿ ಇದೆ.
ಇವೆಲ್ಲವನ್ನು ನೋಡಿಯೂ ಕೂಡ ಪಾಲಿಕೆ, ಸಂಚಾರ ಪೊಲೀಸ್ ವಿಭಾಗ ಕಣ್ಮುಚ್ಚಿ ಕುಳಿತಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇಷ್ಟಾದರೂ ಪಾದಚಾರಿಗಳ ಸುರಕ್ಷತೆಗೆ ಅನುದಾನ ನೀಡುವಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ. ನಗರದಲ್ಲಿ ಇನ್ನೂ ಕೂಡ 2017ರಿಂದ 18ನೇ ಸಾಲಿನ ಯೋಜನೆಗಳು ಜಾರಿಯಾಗುತ್ತಿವೆ. 2019-20ನೇ ಸಾಲಿನಲ್ಲಿ ನಯಾ ಪೈಸೆ ಅನುದಾನವನ್ನು ಕೊಟ್ಟಿಲ್ಲ. ಈ ಬಾರಿ ಬಿಬಿಎಂಪಿ, ಜನಾಗ್ರಹ ಸಂಸ್ಥೆಯೊಂದಿಗೆ ಸೇರಿ ಪಾದಚಾರಿ ಸುರಕ್ಷತೆ ಬಗ್ಗೆ ಜನರ ಸಮೀಕ್ಷೆ ನಡೆಸಿ, 20-21ನೇ ಸಾಲಿನ ಬಜೆಟ್ನಲ್ಲಿ ಹೆಚ್ಚು ಅನುದಾನ ಕಲ್ಪಿಸುವ ಬಗ್ಗೆ ಅಭಿಯಾನ ನಡೆಸಿದೆ. ಈ ವರ್ಷ 15ನೇ ಹಣಕಾಸು ಯೋಜನೆಯಡಿಯಲ್ಲಿ ಪಾದಚಾರಿ ಸ್ನೇಹಿ ಯೋಜನೆಗಳ ಜಾರಿಗೆ ಅನುದಾನ ಮೀಸಲಿಡಲಾಗಿದೆ.
ಪಾದಚಾರಿಗಳ ಸಾವಿನ ಸಂಖ್ಯೆ:
ನಗರದಲ್ಲಿ 2018ರಲ್ಲಿ 276, 2019ರಲ್ಲಿ 272 ಪಾದಚಾರಿಗಳು ಸಾವನ್ನಪ್ಪಿದ್ದಾರೆ. ಹೆಚ್ಚು ಸಮಯ ಲಾಕ್ಡೌನ್ ಇದ್ದರೂ ಕೂಡ 2020ರಲ್ಲಿ 124 ಮಂದಿ ಮೃತಪಟ್ಟಿದ್ದಾರೆ. ದೇಶದ 87 ನಗರಗಳ ಪೈಕಿ ಬೆಂಗಳೂರಿನಲ್ಲೇ ಅಧಿಕ ಅಪಘಾತಗಳಾಗಿವೆ. ಹಿರಿಯ ನಾಗರಿಕರು ಹೆಚ್ಚು ಅಪಘಾತಕ್ಕೊಳಗಾಗಿದ್ದಾರೆ. ರಸ್ತೆ ದಾಟುವ ವೇಳೆ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪಘಾತಗಳು ಸಂಭವಿಸಿವೆ.
ಬಿಬಿಎಂಪಿ ಹಾಗೂ ಸಂಚಾರಿ ಪೊಲೀಸ್ ಇಲಾಖೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರೂ ಕೂಡ ಪ್ರಯೋಜನವಾಗುತ್ತಿಲ್ಲ. ಬಿಬಿಎಂಪಿ ಹಾಗೂ ಸಂಚಾರ ಪೊಲೀಸ್ ವಿಭಾಗದಿಂದ ಪ್ರತಿವರ್ಷ ರಸ್ತೆ ಸುರಕ್ಷತಾ ಸಪ್ತಾಹ ನಡೆಸಿ, ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಥಿಯೇಟರ್ಗಳಲ್ಲಿ ಜಾಹೀರಾತು ಪ್ರದರ್ಶನ ಮಾಡಲಾಗುತ್ತಿದೆ. ಪಾದಚಾರಿ ಮಾರ್ಗಗಳಿಗೆ ತೊಡಕಾಗುವ ಓಎಫ್ಸಿ ಕೇಬಲ್ಗಳು, ಅನಧಿಕೃತ ಫುಟ್ಪಾತ್ ಅಂಗಡಿಗಳ ತೆರವು ಕೆಲಸ ಅಲ್ಲೊಂದು-ಇಲ್ಲೊಂದು ಮಾತ್ರ ನಡೆಯುತ್ತಿದೆ. ಆದರೆ ಇಡೀ ನಗರದಲ್ಲಿ ಫುಟ್ಪಾತ್ ಒತ್ತುವರಿ, ಅಡ್ಡಾದಿಡ್ಡಿ ಕೇಬಲ್ಗಳ ಅಳವಡಿಕೆಯಾಗಿದ್ದು, ಹೈಕೋರ್ಟ್ ಕೂಡ ತೆರವುಗೊಳಿಸುವಂತೆ ಚಾಟಿ ಬೀಸಿದೆ.
ಪಾದಚಾರಿ ಸ್ನೇಹಿ ಮಾರ್ಗ
ಈ ಬಾರಿ ನಗರದ ಚರ್ಚ್ ಸ್ಟ್ರೀಟ್ಅನ್ನು ಪಾದಚಾರಿ ಸ್ನೇಹಿ ಮಾರ್ಗವಾಗಿ ಮಾಡಲು ವಾರಾಂತ್ಯದಲ್ಲಿ ವಾಹನ ಓಡಾಟ ನಿಷೇಧಿಸಲಾಗಿದೆ. ಇದೇ ರೀತಿ ಕಮರ್ಷಿಯಲ್ ಸ್ಟ್ರೀಟ್ ಹಾಗೂ ನಗರದ ಪ್ರಮುಖ ಶಾಪಿಂಗ್ ರಸ್ತೆಗಳಲ್ಲೂ ವಾಹನ ಓಡಾಟ ನಿಷೇಧಿಸಲು ಯೋಜನೆ ಹಾಕಲಾಗಿದೆ. ಇನ್ನು ರೇಸ್ ಕೋರ್ಸ್ ರಸ್ತೆಯಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ವಿದ್ಯಾರ್ಥಿಗಳೇ ಸಿಎಂಗೆ ನಗರ ಪ್ರದಕ್ಷಿಣೆ ವೇಳೆ ಮನವಿ ಮಾಡಿದ್ದಾರೆ.
ಇದಲ್ಲದೆ ರಸ್ತೆಗಳಲ್ಲಿ ಪಾದಚಾರಿಗಳಿಗೆ ಸಿಗ್ನಲ್ ಅಳವಡಿಕೆ, ರಸ್ತೆ ವಿಭಜಕ, ಫುಟ್ಪಾತ್ ನಿರ್ಮಾಣ ಹಾಗೂ ನಿರ್ವಹಣೆಗೆ ಬಿಬಿಎಂಪಿಯ ಟ್ರಾಫಿಕ್ ಇಂಜಿನಿಯರಿಂಗ್ ಸೆಲ್ ಕೆಲಸ ಮಾಡುತ್ತಿದೆ. ಈ ವಿಭಾಗದ ಚೀಫ್ ಇಂಜಿನಿಯರ್ ಶ್ರೀನಿವಾಸ್ ಎಂ.ವಿ. ಮಾಹಿತಿ ನೀಡಿ, ಈ ಬಾರಿ 15ನೇ ಹಣಕಾಸು ಯೋಜನೆಯಡಿ ಅನುದಾನ ಮೀಸಲಿಟ್ಟಿದ್ದು, ಕೆಲ ಯೋಜನೆಗಳ ಪ್ರಸ್ತಾವನೆ ನೀಡಲಾಗಿದೆ ಎಂದಿದ್ದಾರೆ.
ಪಾಲಿಕೆಯ ಹೊಸ ಯೋಜನೆಗಳು:
*ಪಾದಚಾರಿ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆಗೆ - 20 ಕೋಟಿ ರೂ.
*ಬಸ್ ಬೇ ನಿರ್ಮಾಣಕ್ಕೆ - 5 ಕೋಟಿ ರೂ.
*ಲೇನ್ ಡಿಸಿಪ್ಲಿನ್, ಲೇನ್ ಮಾರ್ಕಿಂಗ್ಗಾಗಿ- 20 ಕೋಟಿ ರೂ.
*ಟೆಂಡರ್ ಶ್ಯೂರ್ ರಸ್ತೆಯಲ್ಲಿ ಉತ್ತಮ ಪಾದಚಾರಿ ವ್ಯವಸ್ಥೆ ಮಾಡಲು - 5.2 ಕೋಟಿ ರೂ.
ಇದಲ್ಲದೇ ನಗರದಲ್ಲಿ ಪಾದಚಾರಿಗಳ ಅಪಘಾತ ತಪ್ಪಿಸಲೆಂದೇ ಪಾದಚಾರಿ ಮೇಲ್ಸೆತುವೆ ನಿರ್ಮಾಣ ಮಾಡಲಾಗಿದೆ. ಆದರೆ ಅನೇಕ ಕಡೆ ಜನರು ಇದನ್ನು ಸದುಪಯೋಗಪಡಿಸದೆ ರಸ್ತೆಯಲ್ಲೇ ದಾಟುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಸುಮಾರು 80 ಪಾದಚಾರಿ ಮೇಲ್ಸೇತುವೆಗಳಿವೆ. 40 ಪಾದಚಾರಿ ಮೇಲ್ಸೆತುವೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಇದ್ದು, 14 ಸ್ಕೈವಾಕ್ಗಳು ನಿರ್ಮಾಣ ಹಂತದಲ್ಲಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಸುಸಜ್ಜಿತ ರಸ್ತೆ ಜೊತೆಗೆ ಬೇಕಿದೆ ಸುರಕ್ಷಿತ ಪಾದಚಾರಿ ಮಾರ್ಗ; ಅಪಘಾತಗಳ ನಿಯಂತ್ರಣಕ್ಕೆ ಇದೊಂದೇ ದಾರಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸದ್, ಪಾದಚಾರಿಗಳ ಸುರಕ್ಷತೆಗೆ ಪಾಲಿಕೆ ಕ್ರಮ ಕೈಗೊಳ್ಳುತ್ತಿದೆ. ಈ ಬಾರಿ ಬಜೆಟ್ನಲ್ಲಿ ಅನುದಾನ ಮೀಸಲಿಡಲಾಗುವುದು ಎಂದಿದ್ದಾರೆ.