ಬೆಂಗಳೂರು : ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಸ ವಿಲೇವಾರಿ ವಾಹನ ಚಾಲಕರಿಗೆ ಕಳೆದ 9 ತಿಂಗಳಿನಿಂದ ಸಂಬಳ ಬಂದಿಲ್ಲ ಎಂದು ಆರೋಪಿಸಿ ನೌಕರರು ಪ್ರತಿಭಟನೆ ನಡೆಸಿದ್ದಾರೆ.
ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಿದ ಚಾಲಕರು, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಲಕರು ರಾಜಸ್ಥಾನ ಮೂಲದ ಟಿಪಿಎಸ್ ಸಂಸ್ಥೆ ಅಡಿ ಕೆಲಸ ಮಾಡುತ್ತಿದ್ದು, ಇನ್ನೆರಡು ದಿನಗಳಲ್ಲಿ ಕಳೆದ ಏಳು ತಿಂಗಳ ಸಂಬಳ ನೀಡದೆ ಹೋದಲ್ಲಿ, ನಾಳೆಯಿಂದ ಚಾಲಕರು ಕೆಲಸ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ನಮ್ಮ ಬಳಿ ಹಣ ಇಲ್ಲ. ಸಂಬಳ ಕೇಳಿದ್ರೆ ಇವತ್ತು ನಾಳೆ ಎಂದು ಕಾಲ ದೂಡುತ್ತಿದ್ದಾರೆ. ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ ಮನೆ ಮಾಲೀಕರು ಮನೆ ಖಾಲಿ ಮಾಡಿ ಎಂದು ಹೇಳುತ್ತಿದ್ದಾರೆ. ಇದುವರೆಗೆ ಎಲ್ಲ ಅಧಿಕಾರಿಗಳ ಗಮನಕ್ಕೆ ತಂದರೂ, ಯಾರೂ ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಪ್ರತಿ ಬಾರಿ ನಮಗೆ 5-6 ತಿಂಗಳಿಗೆ ಒಂದು ಸಲ ಸಂಬಳ ಕೊಡುತ್ತಾರೆ. ಗುತ್ತಿಗೆದಾರರಿಗೆ ಕೊಡುವ ಬದಲು ನಮಗೆ ನೇರವಾಗಿ ಕೆಲಸ ವಹಿಸಲಿ. ಅಲ್ಲದೆ ಗಾಡಿಗಳಿಗೆ ಇನ್ಸೂರೆನ್ಸ್ ಕೂಡ ಕಟ್ಟಿಲ್ಲ. ಒಂದು ವೇಳೆ ಗಾಡಿ ಅಪಘಾತವಾದರೆ ಗಾಡಿ ರಿಪೇರಿ ಮಾಡಿಸಲು ನಮ್ಮ ಸಂಬಳದಲ್ಲಿ ಹಣ ಕಟ್ ಮಾಡುತ್ತಾರೆ ಎಂದು ಅಳಲು ತೋಡಿಕೊಂಡರು.