ಬೆಂಗಳೂರು: ಸರ್ಕಾರದ ವಿರುದ್ಧ ಮತ್ತೆ ಗುತ್ತಿಗೆ ವೈದ್ಯರು ಸಿಡಿದೆದಿದ್ದಾರೆ. ಕರ್ನಾಟಕ ರಾಜ್ಯ ಗುತ್ತಿಗೆ ವೈದ್ಯಾಧಿಕಾರಿಗಳ ಸಂಘದಿಂದ ಜುಲೈ 8 ರಂದು ವೈದ್ಯರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟಿಸಲಿದ್ದಾರೆ.
ರಾಜ್ಯದಲ್ಲಿ 507 ಮಂದಿ ಗುತ್ತಿಗೆ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಸಾಕಷ್ಟು ಬಾರಿ ತಮ್ಮನ್ನು ಖಾಯಂ ಮಾಡಿ ಅಂತ ಬೇಡಿಕೊಂಡರೂ ಸಮಸ್ಯೆ ಬಗೆಹರಿದಿಲ್ಲ. ಈ ಹಿಂದೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದರು. ಆದರೆ ಭರವಸೆ ಕೇವಲ ಭರವಸೆ ಆಗಿಯೇ ಉಳಿದಿದೆ. ಹೀಗಾಗಿ, ಜುಲೈ 8ರಂದು ಕರ್ತವ್ಯಕ್ಕೆ ಗೈರಾಗಲು ಗುತ್ತಿಗೆ ವೈದ್ಯರು ನಿರ್ಧರಿಸಿದ್ದಾರೆ.
ಕೋವಿಡ್ ವಿರುದ್ಧ ಹಗಲಿರುಳು ಎನ್ನದೆ ಪ್ರಾಣ ಪಣವಾಗಿಟ್ಟು ಹೋರಾಡುತ್ತಿದ್ದೇವೆ. ಕೊರೊನಾ ಅಷ್ಟೇ ಅಲ್ಲದೇ ಹಲವು ಸಮಯದಲ್ಲಿ ಇಲಾಖೆ ಸಂಕಷ್ಟದಲ್ಲಿ ಇದ್ದಾಗ ಸೇವೆಯನ್ನ ಸಲ್ಲಿಸಿದ್ದೇವೆ. ಖಾಯಂ ವೈದ್ಯರಷ್ಟೇ ಜವಾಬ್ದಾರಿಯನ್ನ ನಾವೂ ನಿರ್ವಹಿಸುತ್ತಿದ್ದು, ವೇತನ ತಾರತಮ್ಯ ಆಗುತ್ತಿದೆ. ಅರ್ಧ ವೇತನವನ್ನ ಪಡೆದು ಹಲವು ವರ್ಷಗಳಿಂದ ಸೇವೆಯನ್ನ ಸಲ್ಲಿಸಲಾಗುತ್ತಿದೆ. ಇಂತಹ ಸಮಯದಲ್ಲೂ ಯಾವುದೇ ಸೇವಾ ಭದ್ರತೆಯಿಲ್ಲದೆ ಸೇವೆಯನ್ನ ಸಲ್ಲಿಸುತ್ತಿದ್ದೇವೆ ಅಂತ ಅಳಲು ತೋಡಿಕೊಂಡಿದ್ದಾರೆ.