ಬೆಂಗಳೂರು: 2015ನೇ ಸಾಲಿನ ಕೆಪಿಎಎಸ್ಸಿ ನೇಮಕಾತಿ ಸಂಬಂಧ ಕೂಡಲೇ ಸಂದರ್ಶನ ದಿನಾಂಕವನ್ನು ಪ್ರಕಟಿಸುವಂತೆ ಆಗ್ರಹಿಸಿ ಜುಲೈ ಮೂರರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2015ನೇ ಸಾಲಿನ ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆ ವಿಳಂಬ ಸಂಬಂಧ ನಾನು ಕಳೆದ ಏಳು ತಿಂಗಳಲ್ಲಿ ಕನಿಷ್ಠ ಇಪ್ಪತೈದು ಬಾರಿಯಾದರೂ ಲೋಕಸೇವಾ ಆಯೋಗದ ಕಚೇರಿಗೆ ಹೋಗಿ ಸಂತ್ರಸ್ತ ಅಭ್ಯರ್ಥಿಗಳ ಸಮಸ್ಯೆಗಳ ಪರಿಹಾರ ಕುರಿತು ಆಗ್ರಹಿಸಿದ್ದೇನೆ. ಡಿಸೆಂಬರ್ 27, 2018ರಲ್ಲಿ ಒಮ್ಮೆ ಕೆಪಿಎಸ್ಸಿ ಕಟ್ಟಡದ ಕದ ತಟ್ಟುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದೆ. 2015ರ ಸಾಲಿನ ಕೆಎಎಸ್ ನೇಮಕಾತಿ ಸಂಬಂಧ ಆಗಸ್ಟ್ 18, 2017ಕ್ಕೆ ಪೂರ್ವಭಾವಿ ಪರೀಕ್ಷೆ ನಡೆದಿತ್ತು. ಮುಖ್ಯ ಪರೀಕ್ಷೆ ನಡೆದ ಕೊನೆಯ ದಿನಾಂಕ ಡಿಸೆಂಬರ್, 22, 2017. ಆದರೆ ಇನ್ನೂ ಫಲಿತಾಂಶ ಪ್ರಕಟವಾಗಲೇ ಇಲ್ಲ ಎಂದು ಕಿಡಿಕಾರಿದರು.
2018ರ ಆಗಸ್ಟ್ ತಿಂಗಳಿನಿಂದ ನಾನು ಆಯೋಗದ ಅಧ್ಯಕ್ಷರು, ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಮುಂತಾದವರೊಡನೆ ನಿರಂತರ ಆಗ್ರಹ ಮಾಡುತ್ತಾ ಬಂದರೂ ಅನೇಕ ಭರವಸೆಯ ದಿನಾಂಕಗಳನ್ನು ನೀಡಿದ್ದರು. ಫಲಿತಾಂಶ ಬಂದಿದ್ದು ಮಾತ್ರ 28.1.2019 ರಂದು. ಆದರೆ ಈ ಆರು ತಿಂಗಳ ನಂತರವೂ ಸಂದರ್ಶನ ಪ್ರಕ್ರಿಯೆ ನಡೆಯಲೇ ಇಲ್ಲ. ಈಗ ಅಭ್ಯರ್ಥಿಗಳೆಲ್ಲಾ ಆತಂಕ, ಹತಾಶೆ ಎದುರಿಸುತ್ತಿದ್ದಾರೆ ಎಂದರು.
ಹತಾಶೆಯ ಅಂಚಿನಲ್ಲಿರುವ ಸಂತ್ರಸ್ತ ಅಭ್ಯರ್ಥಿಗಳ ಪರವಾಗಿ ಕೆಪಿಎಸ್ಸಿ ಕಚೇರಿ ಮುಂದೆ ಜುಲೈ 3ರಂದು ಬೆಳಗ್ಗೆ 8 ಗಂಟೆಯಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದೇನೆ. ಸಂದರ್ಶನ ದಿನಾಂಕ ಪ್ರಕಟಿಸುವ ತನಕ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ತಿಳಿಸಿದರು.