ಬೆಂಗಳೂರು: ಮಾರ್ಚ್ 5ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್ನಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಇಂದು ನಗರದ ಟೌನ್ ಹಾಲ್ ಬಳಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.
ಬಿಜೆಪಿ ಸರ್ಕಾರದ ಹಾಗೂ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಮಾಡಿದ ಎಎಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರಸ್ ಸರ್ಕಾರ ಎಲಿವೇಟೆಡ್ ಕಾರಿಡಾರ್ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿದ್ದ ವೇಳೆ, ಪ್ರತಿಪಕ್ಷದಲ್ಲಿದ್ದ ಬಿಜೆಪಿಯು ಯೋಜನೆಯನ್ನು ವಿರೋಧಿಸಿತ್ತು. ಅದ್ರೀಗ ಬಿಜೆಪಿ ಸರ್ಕಾರವೇ ಈ ಎಲಿವೇಟೆಡ್ ಕಾರಿಡಾರ್ ಯೋಜನೆ ಕೈಗೆತ್ತಿಕೊಂಡು ಸರ್ಕಾರದ ಖಜಾನೆ ಲೂಟಿಗೆ ಪ್ಲಾನ್ ಮಾಡಲಾಗ್ತಿದೆ ಎಂದು ಈಟಿವಿ ಭಾರತನೊಂದಿಗೆ ಮಾತನಾಡಿದ ಆಮ್ ಅದ್ಮಿ ಪಕ್ಷದ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಅರೋಪಿಸಿದರು.
ಅಂದು ಕಾಂಗ್ರೆಸ್ನಲ್ಲಿದ್ದ ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ್ ಇಂದು ಬಿಜೆಪಿಗೆ ಬಂದಿದ್ದು, ಈ ಯೋಜನೆ ಆರಂಭಿಸಲು ಹುನ್ನಾರ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಎಲಿವೇಟೆಡ್ ಕಾರಿಡಾರ್ ಬದಲು ಕಳೆದ ಎರಡು ವರ್ಷಗಳಿಂದ ಬರೀ ಹೇಳಿಕೆಯಲ್ಲೇ ಇರುವ ಸಬ್ಅರ್ಬನ್ ರೈಲು ಕಾಮಗಾರಿಯನ್ನು ಆರಂಭಿಸಲಿ. ಅಲ್ಲದೇ, ನಗರದಲ್ಲಿ ಮೆಟ್ರೋ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಅದನ್ನು ಚುರುಕುಗೊಳಿಸುವತ್ತ ಸರ್ಕಾರ ಗಮನ ಹರಿಸಲಿ ಎಂದರು.
ಈಗಾಗಲೇ ನಗರದ ಎಲೆಕ್ಟ್ರಾನ್ ಸಿಟಿ ಬಳಿ ಎಲಿವೇಟೆಡ್ ಕಾರಿಡಾರ್ ಇದ್ದು, ಅದರಿಂದ ಏನೂ ಪ್ರಯೋಜನ ಇಲ್ಲ ಎಂದ ಮೋಹನ್ ದಾಸರಿ, ಈ ಬಾರಿಯ ಬಜೆಟ್ನಲ್ಲಿ ಏನಾದರು ಕಾರಿಡಾರ್ ಯೋಜನೆಗೆ ಹಣ ಮೀಸಲಿಟ್ಟರೆ ಬೆಂಗಳೂರಿನಾದ್ಯಂತ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ಕೊಟ್ರು.