ಬೆಂಗಳೂರು: ಬೆಳಗಾವಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿಚಾರವಾಗಿ ಕನ್ನಡಿಗರ ಮೇಲೆ ನಡೆದಿದೆ ಎನ್ನಲಾದ ದಾಳಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಇಂದು ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ಬಳಿಕ ಮಾತನಾಡಿದ ಕರವೇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಬೆಳಗಾವಿಯಲ್ಲಿ ಕನ್ನಡಿಗರನ್ನು ಜೈಲಿಗೆ ಹಾಕುವ ಕೆಲಸ ಮಾಡುತ್ತಿದೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದ ಪುಂಡರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಬೇಕು. ಶಿವಸೇನೆ ಹಾಗೂ ಎಂಇಎಸ್ ಸಂಘಟನೆಗಳ ಪುಂಡಾಟಿಕೆ ಹೆಚ್ಚಾಗಿದ್ದು ಅವರನ್ನು ರಾಜ್ಯದಿಂದ ನಿಷೇಧ ಮಾಡಬೇಕೆಂದು ಒತ್ತಾಯಿಸಿದರು.
ಓಟಿಗಾಗಿ ಅವರನ್ನು ಕಾಯದೇ ನಿಷೇಧ ಮಾಡಬೇಕು. ಶಿವಾಜಿಗಿಂತ ನಮಗೆ ಕನ್ನಡಿಗ ಸಂಗೊಳ್ಳಿ ರಾಯಣ್ಣನೇ ಮೇಲು. ಈ ಕೂಡಲೇ ಅಪ್ಪಟ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಮಾಡಬೇಕು. ಕನ್ನಡ ಹೋರಾಟಗಾರರು ಶಾಂತಿ ಬಯಸುತ್ತೇವೆ ಹೊರತು ದೌರ್ಜನ್ಯ ಮಾಡುವುದಿಲ್ಲ. ಮರಾಠಿಗರು ಬೇಕಾದರೆ ಬೇರೆ ರಾಜ್ಯಕ್ಕೆ ಹೋಗಿ ಶಿವಾಜಿ ಪ್ರತಿಮೆ ಅನಾವರಣಗೊಳಿಸಲಿ ಎಂದರು.