ಬೆಂಗಳೂರು : ಮರಾಠ ಪ್ರಾಧಿಕಾರಕ್ಕೆ ಸರ್ಕಾರ ಒಲವು ತೋರುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳಿಂದ ಇಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಪ್ಪು ಪಟ್ಟಿಧರಿಸಿ ಮೈಸೂರು ಬ್ಯಾಂಕ್ ಬಳಿ ಪ್ರತಿಭಟನೆಗಿಳಿದ ಕನ್ನಡ ಪರ ಸಂಘಟನೆಗಳು ನೆವೆಂಬರ್ 30ರೊಳಗೆ ಪ್ರಾಧಿಕಾರ ವಾಪಸ್ ಪಡೆದುಕೊಳ್ಳಲು ಸಮಯ ಕೊಡಲಾಗಿತ್ತು. ಈವರೆಗೂ ಸರ್ಕಾರ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಟಾಳ್ ನಾಗರಾಜ್ ಮಾತನಾಡಿ, ಸರ್ಕಾರ ಪ್ರಮಾಣಿಕವಾಗಿ ಚಿಂತನೆ ಮಾಡಲಿಲ್ಲ. ರಾಜ್ಯದಲ್ಲಿ ಏನೇ ನಡೆದ್ರೂ ನಾವು ಪ್ರಾಧಿಕಾರ ರದ್ದು ಮಾಡಬಾರದು ಎಂದು ಸಿಎಂ ಹೇಳಿದ್ದಾರೆ. ಹಲವು ಮಂತ್ರಿಗಳು, ಎಂಪಿಗಳು ಹೇಳಿದರೂ ಸಿಎಂ ಅವರ ಮಾತಿಗೆ ಬಗ್ಗಿಲ್ಲ. ಇದು ಕನ್ನಡಿಗರಿಗೆ ಮಾಡಿದ ಮಹಾ ದ್ರೋಹ ಎಂದರು.
ಮುಖ್ಯಮಂತ್ರಿಗಳೇ ಬಂದ್‌ನ ವಿಫಲಗೊಳಿಸುತ್ತಿದ್ದಾರೆ. ಬಂದ್ ಮಾಡದಂತೆ ಖುದ್ದು ತಡೆಯುತ್ತಿದ್ದಾರೆ. ಇದು ಕನ್ನಡಿಗರ ಬಂದ್. ಡಿ.5ನೇ ತಾರೀಖು ಎಲ್ಲರೂ ಭಾಗಿಯಾಗಬೇಕು. ಇಲ್ಲವಾದ್ರೆ ಎಲ್ಲಾ ಭಾಷಿಗರಿಗೂ ನಾವು ನಮ್ಮ ರಾಜ್ಯ ಕೊಡಬೇಕಾಗತ್ತೆ.
ಡಿ.5 ನೇ ತಾರೀಖು ಕರ್ನಾಟಕ ಬಂದ್ ಆಗುತ್ತೆ. ರಾಷ್ಟ್ರೀಯ ಹೆದ್ದಾರಿ, ಶಾಲೆಗಳು ಬಂದ್. ಚಿತ್ರಮಂದಿರ, ಲಾರಿ, ಬಸ್, ವ್ಯಾಪರಿಗಳು ಎಲ್ಲಾ ಬಂದ್ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕನ್ನಡಪರ ಹೋರಾಟಗಾರ ಸಾ ರಾ ಗೋವಿಂದ್ ಮಾತನಾಡಿ, ಸರ್ಕಾರ ಪೊಲೀಸ್ ಇಲಾಖೆ ಬಳಸಿಕೊಂಡು ನಮ್ಮ ಮೇಲೆ ಬಲಪ್ರಯೋಗ ಮಾಡುತ್ತಿದೆ. ಮುಖ್ಯಮಂತ್ರಿಗಳಿಗೆ ಕಣ್ಣು, ಕಿವಿ ಇಲ್ಲ. ಹೃದಯ ಮೊದಲೇ ಇಲ್ಲ. ಮರಾಠ ಪ್ರಾಧಿಕಾರ ಮಾಡಿ ನಮ್ಮ ಕನ್ನಡಿಗರಿಗೆ ಮೋಸ ಮಾಡಿದ್ದಾರೆ.
ಸಮುದಾಯ ಪ್ರಾಧಿಕಾರ ಮಾಡಲು ನಮ್ಮ ವಿರೋಧ ಇಲ್ಲ. ಆದ್ರೆ, ಮರಾಠಿಗರ ಪ್ರಾಧಿಕಾರ ಯಾಕೆ ಮಾಡುತ್ತೀರಾ..? ನಾಳೆಯಿಂದ ತಮಿಳಿಗರು, ಗುಜರಾತಿಗರು ಕೇಳ್ತಾರೆ, ಆಗ ಅವರಿಗೂ ಪ್ರಾಧಿಕಾರ ಮಾಡ್ತೀರಾ..? ಎಂದು ಪ್ರಶ್ನಿಸಿದರು.
5ನೇ ತಾರೀಖು ಬಂದ್ ಆಗೇ ಆಗುತ್ತೆ. ಸ್ವಾಭಿಮಾನಿ ಕನ್ನಡಿಗರಿಗೆ ನಾವು ಒತ್ತಾಯ ಮಾಡುತ್ತೇವೆ. ಮಾಲ್ಗಳು, ವಕೀಲರ ಸಂಘ, ಆಟೋಚಾಲಕರ ಸಂಘ ಸೇರಿದಂತೆ 2 ಸಾವಿರ ಸಂಘಟನೆಗಳು ಭಾಗಿಯಾಗಲಿವೆ. ಹೋರಾಟ ನಿರಂತರವಾಗಿದೆ ಎಂದು ಹೇಳಿದರು.