ಬೆಂಗಳೂರು: ಚನ್ನರಾಯಪಟ್ಟಣದ ಬಳಿ ಕೆಐಎಡಿಬಿ ವಶಪಡಿಸಿಕೊಂಡಿರುವ ಭೂಮಿಗೆ ಪರಿಹಾರ ನೀಡದೆ ವಿಳಂಬ ಮಾಡುತ್ತಿದ್ದು, ಕೂಡಲೇ ತನಿಕೆಯಾಗಬೇಕೆಂದು ಕರ್ನಾಟಕ ಮಾದಿಗ ದಂಡೋರು ಸಂಘದ ರಾಜ್ಯಾಧ್ಯಕ್ಷ ಬುಳ್ಳಹಳ್ಳಿ ಎಂ ರಾಜಣ್ಣ ಒತ್ತಾಯಿಸಿದ್ದಾರೆ.
ಹಲವು ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕದ ಮಾದಿಗ ದಂಡೋರ ಸಂಘದ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಎಡಿಬಿ ವಶಪಡಿಸಿಕೊಂಡಿರುವ ಭೂಮಿಗೆ ಪರಿಹಾರ ನೀಡದೆ ವಿಳಂಬ ಮಾಡುತ್ತಿದ್ದು, ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಕಮಿಷನ್ ನೀಡಿದವರಿಗೆ ಮಾತ್ರ ಪರಿಹಾರ ನೀಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ತನಿಖೆ ಆಗಬೇಕೆಂದು ಎಂ ರಾಜಣ್ಣ ಒತ್ತಾಯಿಸಿದರು. ಅಲ್ಲದೆ ಎಸ್ಸಿಎಸ್ಟಿ ಜನರಿಗೆ ಮೋಸ ಮಾಡುತ್ತಿದ್ದಾರೆ. ನಮಗೆ ಬರಬೇಕಾದ ಸೌಕರ್ಯಗಳನ್ನು ಕೊಡುವುದರಲ್ಲಿ ತಾರತಮ್ಯ ಮಾಡುತ್ತ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿದರು.
ಮುಧೋಳ ತಾಲೂಕಿನ ಶಿರೋಳ ಗ್ರಾಮದ ಜೋಡಿ ಕೊಲೆಗೈದ ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕು. ರಾಜ್ಯದಲ್ಲಿ ಮಾದಿಗ ಜನಾಂಗದವರ ಮೇಲೆ ದೌರ್ಜನ್ಯ ಹೆಚ್ಚಾಗಿದ್ದು, ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ತಾಲೂಕಿನ ಹಲವು ಗ್ರಾಮಗಳಿಗೆ ಸ್ಮಶಾನಕ್ಕೆ ದಾರಿಗಳಿಲ್ಲ. ಅವುಗಳಿಗೆ ದಾರಿ ಕಲ್ಪಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಇನ್ನು ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು, ಜಿಲ್ಲಾ ಮಟ್ಟದಲ್ಲಿನ ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯ ಮಟ್ಟದ ಸಮಸ್ಯೆಗಳನ್ನು ಮೇಲಿನ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದ್ರು.