ಬೆಂಗಳೂರು: ಕೇಂದ್ರ ಸರ್ಕಾರ 'ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ'ಕ್ಕೆ (RCEP) ಮುಂದಾಗಿರುವುದನ್ನು ವಿರೋಧಿಸಿ ಕಿಸಾನ್ ಕಾಂಗ್ರೆಸ್ ರೈಲ್ ರೋಖೋ ಚಳವಳಿ ನಡೆಸಿತು. ನಗರದ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಯತ್ನಿಸಿದರು.
ಈ ವೇಳೆ ಪೊಲೀಸರು, ರೈಲ್ವೆ ನಿಲ್ದಾಣದ ಶಟರ್ ಎಳೆದು, ಪ್ರತಿಭಟನಾಕಾರರು ರೈಲ್ವೆ ಪ್ಲಾಟ್ ಫಾರಂ ಒಳ ನುಗ್ಗದಂತೆ ತಡೆದರು. ಮಾಜಿ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆಸಿಯಾನ್ ಒಕ್ಕೂಟದ ಹತ್ತು ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿದರೆ, ದೇಶದ ರೈತರಿಗೆ ತೀವ್ರ ಪೆಟ್ಟು ಬೀಳಲಿದೆ. ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತದೆ ಎಂದು ವಿರೋಧಿಸಿ, ಈ ಒಪ್ಪಂದ ತರಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ರೈತ ವಿರೋಧಿ, ಬಡವರ ವಿರೋಧಿ ಸರ್ಕಾರ. ಈಗಾಗಲೇ ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ವಿದೇಶಿ ಸರಕುಗಳು ನಮ್ಮ ದೇಶಕ್ಕೆ ಬಂದರೆ, ಸ್ಥಳೀಯ ಉದ್ಯಮಗಳು, ರೈತರ ಕಸುಬುಗಳ ಹಾಳಾಗಿ ಹೋಗಲಿವೆ. ಯಾವುದೇ ಕಾರಣಕ್ಕೂ ಈ ಆರ್ಸಿಇಪಿ ಒಪ್ಪಂದ ಬರಲು ಬಿಡೋದಿಲ್ಲ ಎಂದು ಪ್ರತಿಭಟಿಸಿದರು.