ಬೆಂಗಳೂರು: ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರು ಮತ್ತು ಸಿಬ್ಬಂದಿಗಳು, ತಲೆ ಮೇಲೆ ಕಟ್ಟಡ ಕಲ್ಲು, ಜಲ್ಲಿ, ಎಂ-ಸ್ಯಾಂಡ್ ಮೂಟೆ ಹೊತ್ತು ಸಮಸ್ಯೆ ನಿವಾರಣೆಗೆ 3 ಬೇಡಿಕೆಗಳನ್ನು ಇಟ್ಟು ಸರ್ಕಾರದ ಗಮನ ಸೆಳೆಯಲು ರಾಜಧಾನಿಯ ಮಾಧವನಗರದ ತಮ್ಮ ಒಕ್ಕೂಟದ ಕೇಂದ್ರ ಕಚೇರಿಯ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅಧ್ಯಕ್ಷ ರವೀಂದ್ರ ಶೆಟ್ಟಿ, ಕೊಡಲೇ ಮುಖ್ಯಮಂತ್ರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರು ಹಾಗೂ ಸಂಬಂಧಿಸಿದ ಎಲ್ಲಾ ಸಚಿವರು ನಮ್ಮ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು. ಸಮಸ್ಯೆ ನಿವಾರಣೆಯಾಗದೇ ಹೋದರೆ ಅನಿರ್ಧಿಷ್ಟಾವಧಿ ಗಣಿಗಾರಿಕೆ ಸ್ಥಗಿತಗೊಳಿಸಿ, ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿಯಾದ ಪುರುಷೋತ್ತಮ್ ಎನ್ನುವವರು ಮಾತನಾಡಿ, ಡಿಸೆಂಬರ್ 28 ರಂದು ಬೆಳಗಾವಿಯಲ್ಲಿ "ಬೃಹತ್ ಪ್ರತಿಭಟನೆ" ಮಾಡುವುದೆಂದು ತೀರ್ಮಾನಿಸಲಾಗಿದೆ. 50 ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಎಲ್ಲರೂ ತಮ್ಮ ಕ್ರಷರ್ ಮತ್ತು ಕ್ವಾರಿ ಘಟಕಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಸಂಘದ ಗೌರವಾಧ್ಯಕ್ಷ ಡಿ.ಸಿದ್ದರಾಜು ಮಾತನಾಡಿ, ಸರ್ಕಾರಕ್ಕೆ ಈಗಾಗಲೇ ರಾಜಧನ ಸಂದಾಯವಾಗಿರುವುದರಿಂದ ಮತ್ತೆ ಗಣಿ ಗುತ್ತಿಗೆದಾರರಿಂದ ವಸೂಲಿ ಮಾಡಲು ಹೊರಟಿರುವುದು ಸರಿಯಲ್ಲ. ಇದನ್ನು ಮಾಡಬಾರದು. ಕಳೆದ 40 ವರ್ಷಗಳಿಂದ ತ್ವರಿತವಾಗಿ ಕಾಮಗಾರಿ ನಡೆಸುವ ದೃಷ್ಠಿಯಿಂದ ಕಾಮಗಾರಿ ನಿರ್ವಹಣಾ ಇಲಾಖೆಗಳಲ್ಲಿ ರಾಜಧನವನ್ನು ಪಾವತಿಸಿಕೊಂಡು ಬಂದಿದ್ದೇವೆ. ಸರ್ಕಾರಕ್ಕೆ ಸಂದಾಯವಾಗತಕ್ಕ ರಾಜಧನ ಈಗಾಗಲೇ ಸಂದಾಯವಾಗಿರುತ್ತದೆ. ಆದ್ದರಿಂದ ಮತ್ತೆ ಗಣಿಗುತ್ತಿಗೆದಾರರಿಂದ ವಸೂಲಿ ಮಾಡಬಾರದು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಕಿರಣ್ ರಾಜ್ ಬಿ.ಆರ್ ಮಾತನಾಡಿ, ಕಾನೂನು ಬದ್ಧವಾಗಿ ಗಣಿಗಾರಿಕೆ ನಡೆಸುವುದಕ್ಕೆ ಪೂರಕವಾಗಿ ನಿಯಮಗಳು ಸಮರ್ಪಕವಾಗಿರುವುದಿಲ್ಲ. ಆದ್ದರಿಂದ ನಿಯಮಗಳ ಸಮಗ್ರ ತಿದ್ದುಪಡಿಯ ಅಗತ್ಯವಿರುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಸಿ ಟಿ ರವಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ