ಬೆಂಗಳೂರು: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ವಿನೂತನ ಪ್ರತಿಭಟನೆಯಾಗಿ "100 ನಾಟ್ಔಟ್" ಹೆಸರಿನ ಹೋರಾಟ ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಎಲ್ಲೆಡೆ ಪೆಟ್ರೋಲ್ ಪಿಕ್ ಪಾಕೆಟ್ ನಡೆಯುತ್ತಿದೆ ಎಂದು ಗುಡುಗಿದರು.
ಪೆಟ್ರೋಲ್ -ಡೀಸೆಲ್ ದರ ಏರಿಕೆ 100 ನಾಟ್ಔಟ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಐದು ದಿನ ನಾವು ಇದನ್ನು ಹಮ್ಮಿಕೊಂಡಿದ್ದು, ಎಲ್ಲ ಕಡೆ ಯಶಸ್ವಿಗೊಳಿಸಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ. ಕಳೆದ ನಾಲ್ಕೈದು ತಿಂಗಳಲ್ಲಿ 48 ಬಾರಿ ಪೆಟ್ರೋಲ್ ಬೆಲೆ ಹೆಚ್ಚಿಸಲಾಗಿದೆ. ಇದರಿಂದ ಜೂ.11 ರಿಂದ 15ರವರೆಗೆ ಸರಣಿ ರೂಪದಲ್ಲಿ ರಾಜ್ಯಾದ್ಯಂತ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಪ್ರಕಟಿಸಿದರು.
ಜೂ.11 ರಂದು ಜಿಲ್ಲಾ ಕೇಂದ್ರ, ಜೂ. 12 ತಾಲೂಕು, 13ರಂದು ಜಿಲ್ಲಾ ಪಂಚಾಯಿತಿ, ಹೋಬಳಿ ಕೇಂದ್ರ, 14ರಂದು ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ 15ರಂದು ಉಳಿದ ಭಾಗದ ಪ್ರಮುಖ ಪೆಟ್ರೋಲ್ ಬಂಕ್ಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಪಕ್ಷದ ವಿವಿಧ ವಿಭಾಗಗಳು ಸಕ್ರಿಯವಾಗಿ ಇದರಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿ ಸಂಘಟನೆ, ಯುವ ಸಂಘಟನೆ, ಮಹಿಳಾ, ವಿವಿಧ ಜಾತಿ, ವರ್ಗದ ಸಂಘಟನೆಗಳು ತಮಗೆ ಬೇಕಾದ ಸ್ಥಳ ಹಂಚಿಕೊಂಡು ಕನಿಷ್ಠ 5 ಸಾವಿರ ಪೆಟ್ರೋಲ್ ಬಂಕ್ಗಳಲ್ಲಿ ಬೆಳಗ್ಗೆ 11ರಿಂದ 12 ಗಂಟೆ ಅವಧಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದಾರೆ.
ಒಬ್ಬೊಬ್ಬ ನಾಯಕರಿಗೂ ಜವಾಬ್ದಾರಿ ನೀಡುತ್ತಿದ್ದೇವೆ. ಎಲ್ಲಿ ಯಾರು ಉಸ್ತುವಾರಿ ವಹಿಸಿಕೊಂಡಿದ್ದಾರೋ ಆ ನಾಯಕರ ಪಟ್ಟಿ ಬಿಡುಗಡೆ ಮಾಡುತ್ತೇವೆ. ನಾಯಕರು ಪ್ರತಿಭಟನೆಯನ್ನು ಝೂಮ್ ಆ್ಯಪ್ ಮೂಲಕ ಲೈವ್ ನೀಡಬೇಕು. ಪಕ್ಷದ ರಾಜ್ಯ ಮುಖಂಡರು ಪಾಲ್ಗೊಳ್ಳುತ್ತಾರೆ. ಪ್ರತಿಪಕ್ಷ ನಾಯಕರು, ನಾನು, ಪರಿಷತ್ ಪ್ರತಿಪಕ್ಷ ನಾಯಕರು, ಶಾಸಕರು, ಮಾಜಿ ಸಚಿವರು ಸಂಸದರು ಪಾಲ್ಗೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.
ಕಳೆದ ಕೆಲ ತಿಂಗಳಲ್ಲಿ ಪ್ರತಿ ತಿಂಗಳೂ 15-16 ಸಾರಿ ಪೆಟ್ರೋಲ್ ಬೆಲೆ ಏರಿಕೆ ಆಗಿದೆ. 21 ಲಕ್ಷದ 60 ಸಾವಿರ ಕೋಟಿ ರೂ.ಗಳನ್ನ ಈ ಮೂಲಕ ಕೇಂದ್ರ ಸರ್ಕಾರ ಸಂಪಾದಿಸಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಏರಿಸಿರಲಿಲ್ಲ. ನಮ್ಮ ಅಕ್ಕಪಕ್ಕದ ರಾಷ್ಟ್ರಗಳ ಸ್ಥಿತಿ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಇವರು ನಮಗಿಂತ ಉತ್ತಮ ಜಿಡಿಪಿ ಹೊಂದಿದ್ದಾರೆ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಸ್ಥಿತಿ ಇರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕೇಂದ್ರ, ರಾಜ್ಯ ಸರ್ಕಾರಗಳು ಇಂಧನ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಉಗ್ರವಾದ ಹೋರಾಟ ಮಾಡುತ್ತೇವೆ. ಕೋವಿಡ್ ಆತಂಕ ಗಮನದಲ್ಲಿಟ್ಟುಕೊಂಡು ಪ್ರತಿಭಟನೆ ಮಾಡುತ್ತೇವೆ. ಎಷ್ಟೇ ಜನ ಇರಲಿ, ಬಂಧನಕ್ಕೆ ಅಂಜಬೇಡಿ ಎಂದು ಪಕ್ಷದ ನಾಯಕರಿಗೆ ಸೂಚಿಸುತ್ತೇನೆ. ಪ್ರತಿಕೃತಿ ದಹನದಂತಹ ಕಾರ್ಯ ಮಾಡಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಶಾಸಕರಾದ ಪ್ರಿಯಾಂಕ ಖರ್ಗೆ, ಸೌಮ್ಯ ರೆಡ್ಡಿ ಭಾಗವಹಿಸಿದ್ದರು.
ನಮ್ಮ ಹೋರಾಟದಿಂದಲೇ ಉಚಿತ ಲಸಿಕೆ ಘೋಷಣೆ ಆಗಿದೆ
ಸಚಿವ ನಾರಾಯಣಗೌಡ ಪತ್ರಕ್ಕೆ ಉತ್ತರಿಸಿ ಮಾತನಾಡಿದ ಡಿಕೆಶಿ, ನಾವು ನಿರಂತರವಾಗಿ ನಡೆಸಿದ ಹೋರಾಟದಿಂದಾಗಿಯೇ ಕೇಂದ್ರ ಸರ್ಕಾರ ಈಗ ಉಚಿತ ಲಸಿಕೆ ನೀಡಲು ಮುಂದಾಗಿದೆ. ನಾರಾಯಣಗೌಡರು ಈಗ ಪತ್ರ ಬರೆದಿದ್ದಾರೆ. ಜನರ ಜೀವ ಉಳಿಸುವ ಆಸಕ್ತಿ ಸರ್ಕಾರಕ್ಕೆ ಇರಲಿಲ್ಲ. ಈಗ ನಮ್ಮ ಹೋರಾಟ, ನ್ಯಾಯಾಲಯ ತೀರ್ಪು ಒತ್ತಾಯಪೂರ್ವಕವಾಗಿ ಕೋವಿಡ್ ಲಸಿಕೆ ಉಚಿತವಾಗಿ ನೀಡಲು ಮುಂದಾಗುವಂತೆ ಮಾಡಿದೆ. ಎರಡೂ ಸರ್ಕಾರಕ್ಕೆ ಕೋವಿಡ್ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮಿಂದ ಹೇಳಿಸಿಕೊಂಡು ಈ ಕೆಲಸಕ್ಕೆ ಮುಂದಾಗಬೇಕಿತ್ತಾ ಎಂದು ಪ್ರಶ್ನಿಸಿದರು.