ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಶುಲ್ಕ ಹೆಚ್ಚಿಸಿರುವುದನ್ನು ಖಂಡಿಸಿ ಇಂದು ಎವಿಬಿಪಿ ಪ್ರತಿಭಟನೆ ನಡೆಸಿತು.
2019 -20 ನೇ ಸಾಲಿನ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ಗಳ ಶುಲ್ಕವನ್ನು ಸರಾಸರಿ ಶೇಕಡ 15 ರಷ್ಟು ಹೆಚ್ಚಿಸಿ, ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯುವುದು ಕನಸು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಕ್ರಮವನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಈ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಕೋಟಾದಲ್ಲಿ ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ಮಾಡುವವರು ವಾರ್ಷಿಕ 1,11,959 ರೂಪಾಯಿ ಹಾಗೂ ದಂತ ವೈದ್ಯಕೀಯ ಮಾಡುವವರು ವಾರ್ಷಿಕ 72,484 ರೂಪಾಯಿ ಶುಲ್ಕವನ್ನು ಕಟ್ಟಬೇಕಾಗುತ್ತದೆ.ಇದು ಸಾಮಾನ್ಯವರ್ಗದ ವಿದ್ಯಾರ್ಥಿಗಳಿಗೆರ ಹೊರೆಯಾಗಿ ಪರಿಣಮಿಸಲಿದೆ.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಂತು ಸರ್ಕಾರದ ಈ ರೀತಿಯ ನಿರ್ಧಾರದಿಂದ ವೈದ್ಯಕೀಯ ಶಿಕ್ಷಣದಿಂದ ದೂರ ಉಳಿಯುವಂತಾಗಿದೆ ಅಂತ ಎವಿಬಿಪಿ ಸಂಘಟನೆ ಆಕ್ರೋಶ ಹೊರಹಾಕಿದೆ. ಶಿಕ್ಷಣಕ್ಕೆ ಪ್ರೋತ್ಸಾಹ ಕೊಡಬೇಕಾದ ಸರ್ಕಾರವೇ ಪ್ರತಿ ವರ್ಷ ಶುಲ್ಕ ಹೆಚ್ಚಳ ಮಾಡಿ, ಖಾಸಗಿ ಕಾಲೇಜುಗಳ ಲಾಬಿಗೆ ನಿಂತಿರುವುದು ವಿಪರ್ಯಾಸ ಅಂತ ಬೇಸರ ವ್ಯಕ್ತಪಡಿಸಿದರು.ಕಳೆದ ವರ್ಷ ಹೆಚ್ಚಿಸಿರುವ ಶುಲ್ಕವನ್ನು ಕಡಿಮೆ ಮಾಡಬೇಕು. ಈ ವರ್ಷ ಹೆಚ್ಚಿಸುರುವ 15% ಶುಲ್ಕವನ್ನು ಹಿಂಪಡೆಯಬೇಕು. ಬಡ- ಪ್ರತಿಭಾವಂತ ,ಹಿಂದುಳಿದ ವರ್ಗಗಳ, ವಿದ್ಯಾರ್ಥಿಗಳ ಹಿತ ಕಾಪಾಡುವಂತೆ ಶುಲ್ಕ ನಿಗದಿ ಮಾಡಬೇಕು, ಕೇಂದ್ರದ ಆರ್ಥಿಕವಾಗಿ ಹಿಂದುಳಿದ ಮೀಸಲಾತಿಯನ್ನು ಜಾರಿಗೊಳಿಸಬೇಕು ಅಂತ ಪ್ರತಿಭಟನಾಕಾರರು ಆಗ್ರಹಿಸಿದ್ರು.